ಬೀದರ್: ಜಾತಿ, ಧರ್ಮದ ಜಂಜಾಟದೊಳಗೆ ಸಿಲುಕಿ ಹಿಂದು ಸಮಾಜ ಛಿದ್ರವಾಗುತ್ತ ಸಾಗಿದರೆ ದೇಶಕ್ಕೆ ಬಹುದೊಡ್ಡ ಆಪತ್ತು ಸುತ್ತಿಕೊಳ್ಳುವುದು ಖಚಿತ. ಹೀಗಾಗಿ ಹಿಂದುಗಳು ಸಂಘಟಿತರಾಗಬೇಕು ಎಂದು ರಾಜೇಶ್ವರದ ಶ್ರೀ ರುದ್ರಮುನಿ ಶಿವಾಚಾರ್ಯರು ಹೇಳಿದರು.
ನಗರದ ರಾಘವೇಂದ್ರ ಸ್ವಾಮಿ ಮಂದಿರದ ರಮಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿಂದು ಪರಿಷತ್ (ವಿಎಚ್.ಪಿ) 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಪ್ರಸ್ತುತ ದೇಶದಲ್ಲಿನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸಮಾಜ ಒಡೆದು, ಅರಾಜಕತೆ ಸೃಷ್ಟಿಸಿ ದೇಶಕ್ಕೆ ಗಂಡಾಂತರ ತರುವ ವ್ಯವಸ್ಥಿತ ಪಿತೂರಿ ನಡೆದಿವೆ. ಹೀಗಾಗಿ ಹಿಂದು ಸಮಾಜ ವಿಷಯದ ಗಂಭೀರತೆ ಅರಿತು ಎಲ್ಲರನ್ನೂ ಒಂದೆಡೆ ಸೇರಿಸಿ ಸೌಹಾರ್ದತೆ, ಸಮನ್ವಯತೆ ಸಾಧಿಸಿ ಸಂಘಟಿತರಾಗಬೇಕಿದೆ ಎಂದು ಹೇಳಿದರು.
ಶತಶತಮಾನಗಳಿಂದಲೂ ನಮ್ಮ ದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿವೆ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ, ಶಿಕ್ಷಣ ವ್ಯವಸ್ಥೆ ನಾಶಪಡಿಸುವ ಕೆಲಸ ದಾಳಿಕೋರರು ಮಾಡಿದ್ದಾರೆ. ನಾವಿಂದು ಸ್ವತಂತ್ರರಾಗಿದ್ದೇವೆ. ಆದರೆ ಮಾನಸಿಕ ಗುಲಾಮಗಿರಿ ಮನಸ್ಥಿತಿಯುಳ್ಳ ದುಷ್ಟರಿಂದ ನಾನಾ ಸಮಸ್ಯೆ, ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇನ್ನಾದರೂ ವಸ್ತುಸ್ಥಿತಿ ಅರಿತು ನಾವು ಸಂಘಟಿತರಾಗದಿದ್ದರೆ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಚೇಂದ್ರನಾಥ ಕಾಂಬ್ಳೆ ಮಾತನಾಡಿ, ಇಂದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ನಮ್ಮ ದೇಶದ ಶ್ರೇಷ್ಠ ಇತಿಹಾಸ, ಪರಂಪರೆ ತಿಳಿಸಿಕೊಟ್ಟು ಬಲಿಷ್ಠ ಭಾರತ ನಿರ್ಮಾಣಕ್ಕೆ ಸಜ್ಜುಗೊಳಿಸಬೇಕಿದೆ ಎಂದು ಹೇಳಿದರು.
ಚಿಂತಕ ಬಸವರಾಜ ಯದಲಾಪುರೆ ಬೌದ್ಧಿಕ ನೀಡಿ, ವಿಶ್ವ ಹಿಂದು ಪರಿಷತ್ ಭಾರತ ಸೇರಿದಂತೆ ವಿಶ್ವದ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದೆ. ಹಿಂದು ಸಮಾಜದ ಸಂಘಟನೆ ಜತೆಗೆ ಸದೃಢ, ಸಶಕ್ತ, ಸಮೃದ್ಧ ಭಾರತ ಕಟ್ಟುವ ಸಂಕಲ್ಪ ತೊಟ್ಟು ಕಾರ್ಯನಿರ್ವಹಿಸುತ್ತಿದೆ. ಪರಿಷತ್ ಯಾವುದೇ ಸಮಾಜ, ಸಮುದಾಯದ ವಿರೋಧಿ ಅಲ್ಲ. ದೇಶದ್ರೋಹಿ ಹಾಗೂ ಸಮಾಜಘಾತುಕ ಶಕ್ತಿಗಳ ವಿರುದ್ಧ ಧ್ವನಿ ಎತ್ತುವ ಸಂಘಟನೆಯಾಗಿದೆ ಎಂದರು.
ಲಾಡಗೇರಿ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯರು ನೇತೃತ್ವ, ವಿಎಚ್ ಪಿ ಜಿಲ್ಲಾಧ್ಯಕ್ಷ ಸತೀಶ್ ನೌಬಾದೆ ಅಧ್ಯಕ್ಷತೆ ವಹಿಸಿದ್ದರು. ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್, ವಿಎಚ್.ಪಿ ನಗರಾಧ್ಯಕ್ಷ ವೀರೇಂದ್ರ ಶಾಸ್ತ್ರಿ, ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿದರು. ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ರಾಮಕೃಷ್ಣನ್ ಸಾಳೆ, ಬಸಪ್ಪ ಹಿರಿವಗ್ಗೆ, ರಾಜೇಂದ್ರ ಕುಲಕರ್ಣಿ, ಜಯಕಿಶನ ಬಿಯಾನಿ, ಶಿವಕುಮಾರ ಯದಲಾಪುರೆ ಇತರರಿದ್ದರು.