ಬೀದರ್: ನಗರದ ಹಳ್ಳದಕೇರಿ ತರಕಾರಿ ಮಾರುಕಟ್ಟೆ ಮಳಿಗೆಗಳನ್ನು ತರಾತುರಿಯಲ್ಲಿ ಲೀಸ್ ಕಂ ಸೇಲ್ ಒಪ್ಪಂದದಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ ಆಗ್ರಹಿಸಿದ್ದಾರೆ.
ಎಪಿಎಂಸಿಯಿಂದ ನಿರ್ಮಿಸಿರುವ ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ವ್ಯಾಪಾರಿಗಳಿಗೆ ಲೀಸ್ ಕಂ ಸೇಲ್ ಒಪ್ಪಂದ ಮಾಡಿಕೊಡುವಲ್ಲಿ ಭ್ರಷ್ಟಾಚಾರ ನಡೆದಿದೆ. ಹಿರಿಯ ಅಧಿಕಾರಿಗಳ ಸೂಚನೆ ನಂತರವೂ ಎಪಿಎಂಸಿ ಕಾರ್ಯದರ್ಶಿ ಮಳಿಗೆ ನೋಂದಣಿ ಮಾಡಿಕೊಟ್ಟಿದ್ದು, ಪ್ರತಿ ಮಳಿಗೆಗೆ ಲಕ್ಷಾಂತರ ರೂ. ಲಂಚ ಪಡೆದಿರುವ ಅನುಮಾನವಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ನೋಂದಣಿ ಮಾಡಿಕೊಡುವಲ್ಲಿ ಹೈಕೋರ್ಟ್ ನಿರ್ದೇಶನ ಪಾಲಿಸಿಲ್ಲ. ಇಲಾಖೆ ಅನುಮೋದನೆ ಪಡೆದಿಲ್ಲ. ಹೀಗೆ ನಿಯಮ ಉಲ್ಲಂಘಿಸಿ ಭಾರಿ ಭ್ರಷ್ಟಾಚಾರ ಮಾಡಿರುವ ಕಾರ್ಯದರ್ಶಿಯನ್ನು ತಕ್ಷಣ ಅಮಾನತು ಮಾಡಿ ಮಳಿಗೆ ನೋಂದಣಿ ಕುರಿತು ಸಂಪೂರ್ಣ ತನಿಖೆ ನಡೆಸಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಮಳಿಗೆ ಬಾಡಿಗೆ ವರ್ಷಕ್ಕೆ 13 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಆರು ತಿಂಗಳಲ್ಲಿ ಮೊತ್ತ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ವ್ಯಾಪಾರಿಗಳು ಹೈಕೋಟ್೯ನಿಂದ ತಡೆಯಾಜ್ಞೆ ತಂದಿದ್ದರು. ಇದರ ವಿರುದ್ಧ ಎಪಿಎಂಸಿ ಮೇಲ್ಮನವಿ ಸಲ್ಲಿಸಿತ್ತು. ಆಗ ಹೈಕೋರ್ಟ್ ಒಂದು ಲಕ್ಷ ರೂ. ಕಟ್ಟಿ ಹಾಗೂ ಉಳಿದ ಹಣ 10 ಸಾವಿರ ರೂ. ದಂಡದೊಂದಿಗೆ ಐದು ತಿಂಗಳಲ್ಲಿ ಪಾವತಿಸಿಗೆ ಸೂಚನೆ ನೀಡಿತ್ತು. ಆದರೆ ಎಪಿಎಂಸಿ ಕಾರ್ಯದರ್ಶಿ ದಂಡ ವಸೂಲಿ ಮಾಡುವ ಬದಲು ಹೈಕೋರ್ಟ್ ಆದೇಶ ಗಾಳಿಗೆ ತೂರಿ ವ್ಯಾಪಾರಿಗಳಿಂದ ಲಂಚ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಮುಖರಾದ ಅಖಿಲೇಶ ಸಾಗರ್, ವಿಶಾಲ ದೊಡ್ಡಿ, ಅನೀಲಕುಮಾರ ಮಡ್ಡೆ, ಮಹೇಂದ್ರಕುಮಾರ ಹೊಸಮನಿ, ವಿನೋಧ ಸಿಂಧೆ, ಅನೀಲಕುಮಾರ ಸಾಂಗವಿ, ಸಂಗಮೇಶ ಭಾವಿದೊಡ್ಡಿ ಇದ್ದರು.