ಜಿಲ್ಲೆ

ಸರ್ಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಕಿಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಯತ್ನ ವಿರೋಧಿಸಿ ಹಾಗೂ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ಪೂರ್ಣ ಬಹುಮತದೊಂದಿಗೆ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ-ಜೆಡಿಎಸ್, ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-17ಎ ಅಡಿ ಅನುಮತಿ ನೀಡುವ ವೇಳೆ ಪಾಲಿಸಬೇಕಿದ್ದ ನಿಯಮ ಉಲ್ಲಂಘಿಸಲಾಗಿದೆ. ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡುವುದನ್ನು ಬಿಟ್ಟು ಕೇಂದ್ರ ಹಾಗೂ ಬಿಜೆಪಿ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ರಾಜ್ಯದ ಜನರ ಆಶೀರ್ವಾದದೊಂದಿಗೆ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಕೇಂದ್ರ ಬಳಸಿಕೊಳ್ಳುತ್ತಿದೆ. ರಾಷ್ಟ್ರಪತಿಗಳು ಇದನ್ನು ಪರಿಗಣನೆಗೆ ತೆಗೆದುಕೊಂಡು ತಕ್ಷಣ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರ ಸುಗಮವಾಗಿ ನಡೆಯಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಬೇಡಿಕೆಯ ಮನವಿಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಲಾಯಿತು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ, ಜಿಲ್ಲಾ ಸಂಚಾಲಕ ಅರುಣ ಪಟೇಲ್, ಪ್ರಮುಖರಾದ ಬಾಬುರಾವ ಹೊನ್ನಾ, ಮಾಳಪ್ಪ ಅಡಸಾರೆ, ಎಂ.ಎಸ್. ಮನೋಹರ, ಸಂತೋಷ ಜೋಳದಾಬಕೆ, ರಮೇಶ ಉಮಾಪುರೆ, ನರಸಪ್ಪ ಜಾನಕನೋರ್, ರಾಜಕುಮಾರ ವಾಘಮಾರೆ, ಶಿವರಾಜ ತಡಪಳ್ಳಿ, ವಾಮನ ಮೈಸಲಗೆ, ರಮೇಶ ಬೆಲ್ದಾರ್, ಸತೀಶ ರತ್ನಾಕರ್, ಝರಪ್ಪ ವರ್ಮಾ, ಶಿರೋಮಣಿ ಹಲಗೆ, ಬಸವರಾಜ ಭಾವಿದೊಡ್ಡಿ, ರಾಹುಲ್ ಹಾಲಹಿಪ್ಪರ್ಗಾ, ವಿಜಯಕುಮಾರ ಭಾವಿಕಟ್ಟಿ, ಶಿವಕುಮಾರ ಗುನ್ನಳ್ಳಿ, ಗೌತಮ ಮುತ್ತಂಗಿಕರ್, ಜೈಭೀಮ ಚಿಮ್ಮನಾಯಕ, ಅಬ್ದುಲ್ ಮನ್ನಾನ್ ಸೇಠ, ವಿಠಲದಾಸ ಪ್ಯಾಗೆ ಇದ್ದರು.