ಬೀದರ್: ಒಂದು ಗಂಡು, ಒಂದು ಹೆಣ್ಣು ಹಸುಗೂಸು ನಗರದ ಬ್ರಿಮ್ಸ್ ಆಸ್ಪತ್ರೆಯ ಕಸದ ತೊಟ್ಟಿಯ ಹತ್ತಿರ ಇಬ್ಬರು ಮಹಿಳೆಯರು ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಾಲ್ಕು ದಿನಗಳ ಹಿಂದೆ ಅಪರಿಚಿತ ಇಬ್ಬರು ಮಹಿಳೆಯರು ಎರಡು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಗಮನಿಸಿ ಆ ಮಕ್ಕಳನ್ನು ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ. ಒಂದು ಮಗು ಅಂದಾಜು ಎರಡು ತಿಂಗಳು, ಇನ್ನೊಂದು ಮಗು ಎರಡು ದಿವಸದ್ದಾಗಿದೆ.
ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಶಕುಂತಲಾ ಕೌಜಲಗಿ ನೇತೃತ್ವದಲ್ಲಿ ಶಿಶುಗಳ ಪಾಲನೆ ಮಾಡಿ, ಚಿಕಿತ್ಸೆ ನೀಡಲಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶ ಮೇರೆಗೆ ಭಾಲ್ಕಿ ಹಿರೇಮಠ ಸಂಸ್ಥಾನದ ದತ್ತು ಕೇಂದ್ರಕ್ಕೆ ಹಸುಗೂಸುಗಳನ್ನು ಒಪ್ಪಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ್ ತಿಳಿಸಿದ್ದಾರೆ.