ಬೀದರ್: ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಕರಿ ಕೋಲಿ ಸಮಾಜದ ಭವನಕ್ಕೆ ಅಗತ್ಯ ಭೂಮಿ ಮತ್ತು ಅನುದಾನ ಒದಗಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಜಿಲ್ಲಾ ಟೋಕರಿ ಕೋಳಿ(ಕೋಲಿ) ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವಸೇನೆ ಸಹಯೋಗದಡಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶ ಹಾಗೂ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಭವನಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಜತೆ ಶಾಸಕರ ನಿಧಿಯಿಂದ ಅನುದಾನ ನೀಡುವುದಾಗಿ ಹೇಳಿದರು.
ರಾಜ್ಯದಲ್ಲಿ ವಿವಿಧ ಪದಗಳಿಂದ ಕರೆಯಲ್ಪಡುವ ಟೋಕರಿ ಕೋಳಿ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರದ ಶಿಫಾರಸು ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರದ ಮೇಲೆ ಒತ್ತಡ ಹೇರಿ ಬಹುದಿನಗಳ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದರು.
ಯುವಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮಾತನಾಡಿ, ಟೋಕರಿ ಕೋಲಿ ಸಮಾಜದ ಮೂಲಕುಸುಬು ಮೀನುಗಾರಿಕೆ. ಆದರೆ ಪ್ರಸ್ತುತ ಬೇರೆ ಸಮಾಜದ ಜನ ಸಂಘ ಕಟ್ಟಿಕೊಂಡು ಮೀನುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ನಮ್ಮವರಿಗೆ ಅನ್ಯಾಯವಾಗುತ್ತಿದೆ. ಮೀನುಗಾರಿಕೆ ಮಾಡಲು ಕೋಲಿ ಸಮಾಜದವರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಉದ್ಘಾಟಿಸಿದರು. ಶ್ರೀ ದತ್ತಾತ್ರೇಯ ಗುರೂಜಿ ಸಾನ್ನಿಧ್ಯ, ಟೋಕರಿ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಅಧ್ಯಕ್ಷತೆ ವಹಿಸಿದ್ದರು. ಪೌರಾಡಳಿತ ಸಚಿವ ರಹೀಮ್ ಖಾನ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಪ್ರಮುಖರಾದ ಚಂದ್ರಾಸಿಂಗ್, ಅಮೃತರಾವ ಚಿಮಕೋಡೆ, ಈಶ್ವರಸಿಂಗ್ ಠಾಕೂರ್, ಮಾರುತಿ ಬೌದ್ಧೆ, ಶಾಂತಪ್ಪ ಜಿ.ಪಾಟೀಲ್, ರಾಜಕುಮಾರ ಕರಣೆ, ವಿಜಯಕುಮಾರ ಸೋನಾರೆ, ಅರುಣಕುಮಾರ ಬಾವಗಿ, ಮಾಣಿಕ ನೇಳಗಿ, ನಾರಾಯಣರಾವ ಭಂಗಿ, ಪಾಂಡುರಂಗ ಗುರೂಜಿ, ಸುನೀಲ ಖಾಶೆಂಪುರ, ನಂದಕುಮಾರ ಜಮಗಿಕರ್, ಸರಸ್ವತಿ ಎಂ.ಜಮಾದಾರ್, ಡಿವೈಎಸ್ಪಿ ಶಿವನಗೌಡ ಇತರರಿದ್ದರು.
ಸಾಹಿತಿ ಪಾರ್ವತಿ ಸೋನಾರೆ ಉಪನ್ಯಾಸ ನೀಡಿದರು. ಚಂದ್ರಕಾಂತ ಹಳ್ಳಿಖೇಡಕರ್ ನಿರೂಪಣೆ ಮಾಡಿದರು. ಸತ್ಯಪ್ರಕಾಶ ಹಳ್ಳಿಖೇಡಕರ್ ವಂದಿಸಿದರು.
ವಿಧಾನಸೌಧ ಎದುರು ಚೌಡಯ್ಯ ಪುತ್ಥಳಿ
ವಿಧಾನಸೌಧ ಎದುರು ನಿಜಶರಣ ಅಂಬಿಗರ ಚೌಡಯ್ಯ ಪುತ್ಥಳಿ ನಿರ್ಮಿಸುವ ನಿಟ್ಟಿನಲ್ಲಿ ಸಚಿವ ಈಶ್ವರ ಖಂಡ್ರೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸಲಹೆ ನೀಡಿದರು. ವಿಧಾನಸೌಧದಲ್ಲಿ ಬಹಳಷ್ಟು ಶರಣರು, ಮಹಾತ್ಮರ ಪುತ್ಥಳಿಗಳಿವೆ. ಅದರಂತೆ ಚೌಡಯ್ಯ ಪುತ್ಥಳಿ ನಿರ್ಮಿಸಬೇಕು. ಬೀದರ್ ನಲ್ಲಿ ಟೋಕರಿ ಭವನಕ್ಕೆ ಅಗತ್ಯವಿರುವ ಐದು ಎಕರೆ ಭೂಮಿ ಮತ್ತು ಅನುದಾನ ಒದಗಿಸಬೇಕು ಎಂದು ಕೋರಿದರು.
ವೃತ್ತಿ ಅವಲಂಬನೆ ಬಿಡಿ
ಶಿಕ್ಷಣಕ್ಕೆ ಆದ್ಯತೆ ಕೊಡಿ
ವೃತ್ತಿ ಅವಲಂಬನೆ ಬಿಟ್ಟು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಅವರು, ವೃತ್ತಿ ಅವಲಂಬನೆ ಕಾರಣಕ್ಕೆ ಬಹಳಷ್ಟು ಜನರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಉದ್ಯೋಗ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಸಮಾಜದವರು ಶಿಕ್ಷಣಕ್ಕೆ ಒತ್ತು ನೀಡಬೇಕು. ಸೂರಿಲ್ಲದ ಮೀನುಗಾರರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು. ಮೀನುಗಾರಿಕೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.