ಜಿಲ್ಲೆ

ಸಮಾಜ ಸುಧಾರಕ ನಾರಾಯಣಗುರು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಮಾಜ ಸುಧಾರಣೆ ಶ್ರಮದಿಂದ ಇಂದಿಗೂ ಬ್ರಹ್ಮಶ್ರೀ ನಾರಾಯಣಗುರು ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವದಲ್ಲಿ ಮಾತನಾಡಿ, ಕೇರಳದಲ್ಲಿ ಸಾಮಾಜಿಕ ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನು ನಾರಾಯಣಗುರು ಮಾಡಿದ್ದರು ಎಂದರು.
ನಾರಾಯಣಗುರು ಸೇರಿ ಅನೇಕ ಮಹಾತ್ಮರ ಜಯಂತಿಯನ್ನು ಎಲ್ಲ ಸಮುದಾಯದವರು ಸೇರಿ ಆಚರಿಸಿ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಆಕಾಶವಾಣಿ ಕೇಂದ್ರದ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಉಪನ್ಯಾಸ ನೀಡಿ, ಒಂದೇ ಜಾತಿ, ಒಂದೇ ದೇವರು ಎಂದು ಬೋಧಿಸಿ ಅಸ್ಪೃಶ್ಯತೆ ಪಿಡುಗನ್ನು ತಮ್ಮದೇ ನಿಲುವಿನಲ್ಲಿ ಹೋಗಲಾಡಿಸಲು ಸುಧಾರಣೆಯ ಕ್ರಮ ಕೈಗೊಂಡು ಹಿಂಸೆ ಇಲ್ಲದೆ ಕ್ರಾಂತಿ ಮಾಡಿದ ಮಹಾನ್ ಸಮಾಜ ಸುಧಾರಕ ನಾರಾಯಣಗುರು ಎಂದು ತಿಳಿಸಿದರು.
ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ತಹಸೀಲ್ದಾರ್ ಮಹ್ಮದ್ ಜಿಯಾವುದ್ದಿನ್, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಡಾ.ರಾಜಶೇಖರ ಸೇಡಂಕರ್, ಕಾರ್ಯದರ್ಶಿ ಸುಭಾಷ ಚೌದ್ರಿ, ಸಂಗಯ್ಯ ಸುಲ್ತಾನಪುರ, ಬಸವರಾಜ ಮಾಳಗೆ, ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇತರರಿದ್ದರು.