ಜಿಲ್ಲೆ

ಸಹಕಾರ ಆಸ್ಪತ್ರೆಗೆ ಸೂರ್ಯಕಾಂತ ಪುನರಾಯ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಪುನರಾಯ್ಕೆ ಆಗಿರುವ ಸೂರ್ಯಕಾಂತ ನಾಗಮಾರಪಳ್ಳಿ, ಸಾರ್ವಜನಿಕರು, ಆಸ್ಪತ್ರೆಯ ಷೇರುದಾರ ಸದಸ್ಯರಿಗೆ ಇನ್ನಷ್ಟು ಹೆಚ್ಚಿನ ಆರೋಗ್ಯ ಸೇವೆ ಒದಗಿಸುವುದಾಗಿ ಪ್ರಕಟಿಸಿದ್ದಾರೆ.
ಹಾರೂರಗೇರಿ ಹತ್ತಿರದ ಆಸ್ಪತ್ರೆ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸೂರ್ಯಕಾಂತ ನಾಗಮಾರಪಳ್ಳಿ, ಉಪಾಧ್ಯಕ್ಷರಾಗಿ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಅವಿರೋಧ ಆಯ್ಕೆಯಾದರು. ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗಮಾರಪಳ್ಳಿ, ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ವಿಸ್ತರಿಸಲಾಗುತ್ತದೆ. ಸಾಮಾಜಿಕ ಚಟುವಟಿಕೆಗಳು ವ್ಯಾಪಕವಾಗಿ ನಡೆಯಲಿವೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಕೆಲಸ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದರು.
ಸಹಕಾರ ಕ್ಷೇತ್ರದ ಈ ಆಸ್ಪತ್ರೆಯನ್ನು ಕಟ್ಟಿ ಬೆಳೆಸಿದವರು ದಿವಂಗತ ಡಾ.ಗುರುಪಾದಪ್ಪ ನಾಗಮಾರಪಳ್ಳಿ. ನಾನು ಅಧ್ಯಕ್ಷನಾಗಿ ಮುನ್ನಡೆಸುತ್ತಿದ್ದೇನೆ. ಬಡವರ ಪಾಲಿಗೆ ಆಸ್ಪತ್ರೆು ವರವಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರ, ತಂತ್ರಜ್ಞಾನ ಬಳಸಿ ಜನಾರೋಗ್ಯ ಕಾಪಾಡುವ ಕೆಲಸ ಮಾಡಲಾಗುತ್ತಿದೆ. ಇದು ಸಹಕಾರಿ ಕ್ಷೇತ್ರದ ಆಸ್ಪತ್ರೆ ಆಗಿದ್ದರಿಂದ ಜನಸೇವೆಯೇ ಮುಖ್ಯ ಧ್ಯೇಯವಾಗಿದೆ ಎಂದರು.
ಕೋವಿಡ್ ಎರಡನೇ ಅಲೆ ವೇಳೆ ನಾಗಮಾರಪಳ್ಳಿ ಆಸ್ಪತ್ರೆ, ಫೌಂಡೇಷನ್ನಿಂದ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರ ಆರಂಭಿಸಿ ಕೇವಲ ಒಂದು ರೂಪಾಯಿಯಲ್ಲಿ ಉಪಾಹಾರ, ಊಟ, ಚಿಕಿತ್ಸೆ, ಔಷಧ ನೀಡಲಾಗಿತ್ತು. ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಆಂಬುಲೆನ್ಸ್ ಒದಗಿಸಿದ್ದಲ್ಲದೆ ಧಾರ್ಮಿಕ ವಿಧಿ ವಿಧಾನಗಳಂತೆ ಅಂತಿಮ ಕ್ರಿಯೆ ನಡೆಸಿಕೊಡಲಾಗಿತ್ತು.
ಆಸ್ಪತ್ರೆ ನಿರ್ದೇಶಕರಾದ ಎಂಎಲ್ಸಿ ಭೀಮರಾವ್ ಪಾಟೀಲ್, ಶಿವಕುಮಾರ ಭಾಲ್ಕೆ, ಸಂಜು ಸಿದ್ದಾಪುರ, ನರಸಾರಡ್ಡಿ ಗುಂಡುರಡ್ಡಿ, ರಾಚಪ್ಪ ಬಸವಣ್ಣಪ್ಪ, ಗೋವಿಂದ ವಿಶ್ವನಾಥ, ರಾಘವೇಂದ್ರ ಭಗವಾನರಾವ, ಆಕಾಶ ನಾಗಮಾರಪಳ್ಳಿ, ಡಾ.ರಜನೀಶ್ ವಾಲಿ, ಸಂತೋಷಕುಮಾರ ತಾಳಂಪಳ್ಳಿ, ಡಿ.ಕೆ. ಸಿದ್ರಾಮ, ಸೈಯದ್ ಖಿಜರುಲ್ಲ ಹುಸೈನಿ, ಡಾ.ವಿಜಯಕುಮಾರ ಕೋಟೆ, ರಾಮದಾಸ ಮುಖೇಡಕರ್, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮೀ ಹೂಗಾರ, ನಿಟ್ಟೂರೆ ರಾಜೇಶ್ವರ, ಅಶೋಕ ರೇಜಂತಲ್, ಡಾ.ಚಂದ್ರಕಾಂತ ಗುದಗೆ ಇದ್ದರು.