ಬೀದರ್: ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ಸ್ ಇಂಟರ್‍ನ್ಯಾಷನಲ್ ವಿಶ್ವದ ವಿವಿಧ ದೇಶಗಳಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ನಿರತವಾಗಿದೆ ಎಂದು ಕ್ಲಬ್ಸ್‍ನ ಅಂತರರಾಷ್ಟ್ರೀಯ ಅಧ್ಯಕ್ಷ ಸಿ. ಬಾಲಚಂದ್ರನ್ ಹೇಳಿದರು.
ನಗರದ ಗುಂಪಾ ರಸ್ತೆಯಲ್ಲಿ ಇರುವ ಸಪ್ನಾ ಕನ್ವೆನ್ಷನ್ ಹಾಲ್‍ನಲ್ಲಿ ಶನಿವಾರ ನಡೆದ ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ಸ್ ಇಂಟರ್‍ನ್ಯಾಷನಲ್‍ನ ಜಿಲ್ಲಾ ಘಟಕದ ತೃತೀಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ, ಪರಿಸರ, ಕಾನೂನು ಸೇರಿದಂತೆ ವಿವಿಧ ವಿಷಯಗಳ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ಕ್ಲಬ್ ವಿಶ್ವದ 22 ದೇಶಗಳಲ್ಲಿ ಚಟುವಟಿಕೆ ನಡೆಸುತ್ತಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ತನ್ನ ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಜಿಲ್ಲಾ ಗವರ್ನರ್ ಬಸವರಾಜ ಹೇಡೆ ಮಾತನಾಡಿ, ಜಿಲ್ಲಾ ಘಟಕದಿಂದ ಸಾರ್ವಜನಿಕರ ಸೇವೆ, ಕೈದಿಗಳು, ಪೌರ ಕಾರ್ಮಿಕರ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ರಕ್ತ ತಪಾಸಣೆ ಶಿಬಿರ, ಎಂಜಿನಿಯರಿಂಗ್, ಡಿಪ್ಲೂಮಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್, ಪಠ್ಯಪುಸ್ತಕ, ನೋಟ್ ಪುಸ್ತಕ ವಿತರಣೆ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಒಂದು ವರ್ಷದ ಅವಧಿಯಲ್ಲಿ ಮಾಡಿದ ಕೆಲಸಗಳು ತೃಪ್ತಿ ನೀಡಿವೆ. ಕ್ಲಬ್ ನೂತನ ಪದಾಧಿಕಾರಿಗಳು ಸೇವಾ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಹೇಳಿದರು.
ಕ್ಲಬ್ಸ್ ದ್ವಿತೀಯ ಅಂತರರಾಷ್ಟ್ರೀಯ ಉಪಾಧ್ಯಕ್ಷ ಡಿ.ಬಿ.ಜಿ. ಶಾಸ್ತ್ರಿ ಸಮಾರಂಭವನ್ನು ಉದ್ಘಾಟಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಅವರು ಇಂದಿರಾ ಪ್ರಿಯದರ್ಶಿನಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ನೈಟಿಂಗೇಲ್ ಪ್ಲೆಡ್ಜ್ ಹಾಗೂ ಪ್ರಮಾಣ ವಚನ ಬೋಧಿಸಿದರು.
ನೂತನ ಜಿಲ್ಲಾ ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ಶರಣಯ್ಯ ಸ್ವಾಮಿ ಅವರು ತಮ್ಮ ಜನ್ಮದಿನದ ಪ್ರಯುಕ್ತ
ನಗರದ ಎರಡು ವಿಶೇಷ ಚೇತನ ಶಾಲೆಗಳ ಮಕ್ಕಳಿಗೆ ಟಿ ಶರ್ಟ್ ವಿತರಿಸಿದರು.
ಬೊಜ್ಜ ಮಧುಸೂಧನ, ಡಾ. ನವೀನಾ ಶೆಟ್ಟಿಗಾರ್, ದಿನಕರ ಶೆಟ್ಟಿ, ಮೊರ ಅಂಜಯ್ಯ, ಶಂಕರೆಪ್ಪ ಬೊಮ್ಮಾ, ಜ್ಞಾನಗಂಗಾ ವಿದ್ಯಾಪೀಠದ ನಿರ್ದೇಶಕ ಮಣಿರತ್ನ ಹೇಡೆ, ಡಾ. ಅನಿಲ್ ರಾಯಪಳ್ಳಿ ಇದ್ದರು.
ಎಂಜೆಲ್ ಡಬೋರಾ ನಿರೂಪಿಸಿದರು. ವೀರೇಶ ಧರ್ಮಣ್ಣೆ ವಂದಿಸಿದರು.
ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ಸ್ ಇಂಟರ್‍ನ್ಯಾಷನಲ್ ಹಾಗೂ ಇಂದಿರಾ ಪ್ರಿಯದರ್ಶಿನಿ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.