ಬೀದರ್: ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರೂ. 98.16 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಡೈನಿಂಗ್ ಹಾಲ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ರಾಜೇಂದ್ರಕುಮಾರ ಗಂದಗೆ ನೇತೃತ್ವದ ನೌಕರರ ಸಂಘವು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ನೌಕರರ ಭವನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಡೈನಿಂಗ್ ಹಾಲ್‍ನಿಂದ ನೌಕರರಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮೀಟಿಂಗ್ ಹಾಲ್‍ಗೆ ಬಸವರಾಜ ಭರಶೆಟ್ಟಿ ಅವರ ಹೆಸರಿಟ್ಟಿರುವುದು ಹಾಗೂ ಪ್ರತಿ ವರ್ಷ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಬಸವರಾಜ ಭರಶೆಟ್ಟಿ ಮೀಟಿಂಗ್ ಹಾಲ್ ಅನ್ನು ಉದ್ಘಾಟಿಸಿದ ಪೌರಾಡಳಿತ ಸಚಿವ ರಹೀಂಖಾನ್ ಅವರು, ಸಂಘದ ಚಟುವಟಿಕೆಗಳಿಗೆ ತಮ್ಮ ಸಹಕಾರ ಇರಲಿದೆ ಎಂದು ಹೇಳಿದರು.
ನೌಕರರ ಭವನವನ್ನು ಮಾದರಿ ಮಾಡುವ ಸಂಕಲ್ಪ ನನ್ನದಾಗಿದೆ. ಬರುವ ದಿನಗಳಲ್ಲಿ ಅತಿಥಿಗೃಹ, ಹವಾ ನಿಯಂತ್ರಿತ ಹಾಲ್, ತೆರೆದ ಸಭಾಂಗಣ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ನೌಕರರ ಕಾರ್ಯಾಗಾರ ಸಭಾಂಗಣ ನಿರ್ಮಿಸುವ ಯೋಜನೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ವಿಶಾಲವಾದ ಸುಸಜ್ಜಿತ ಡೈನಿಂಗ್ ಹಾಲ್ ನಿರ್ಮಾಣಗೊಂಡಿದೆ. ಎರಡು ಅವಧಿಯಲ್ಲಿನ ಕೆಲಸಗಳು ತೃಪ್ತಿ ನೀಡಿವೆ. ಮುಂದೆಯೂ ನೌಕರರ ಹಿತರಕ್ಷಣೆಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ನೌಕರರ ಭವನದ ಮುಂದುವರಿದ ಕಾಮಗಾರಿಗಳಿಗೆ ಸಂಸದರ ನಿಧಿಯಿಂದ ಅನುದಾನ ಕೊಡಲಾಗುವುದು ಎಂದು ಸಂಸದ ಸಾಗರ್ ಖಂಡ್ರೆ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಮುಂದುವರಿದ ಕಾಮಗಾರಿಗೆ ರೂ. 5 ಲಕ್ಷ ಅನುದಾನ ಒದಗಿಸುವ ವಾಗ್ದಾನ ಮಾಡಿದರೆ, ಶಶೀಲ್ ನಮೋಶಿ, ಎಂ.ಜಿ. ಮುಳೆ ಕೂಡ ಅನುದಾನ ಕಲ್ಪಿಸುವ ಆಶ್ವಾಸನೆ ನೀಡಿದರು.
ನೂತನ ಸಂಸದ, ವಿಧಾನ ಪರಿಷತ್ ಸದಸ್ಯರು, ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರ ಜೊನ್ನಿಕೇರಿ, ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಬಸವರಾಜ ಭರಶೆಟ್ಟಿ ಅವರ ಪತ್ನಿ ಪ್ರೇಮಿಲಾ, ಬಿ. ಜನಾರ್ದನ್ ಅವರ ಪತ್ನಿ ಕುಮದವಳಿ, ಸಂಘದ 100 ಹಳೆಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಅಧಿಕ ಅಂಕ ಗಳಿಸಿದ 122 ನೌಕರರ ಮಕ್ಕಳಿಗೆ ತಲಾ ರೂ. 1 ಸಾವಿರ ನಗದು, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಐದು ವರ್ಷಗಳ ಸಾಧನೆ ಪುಸ್ತಕ ಬಿಡುಗಡೆ ಮಾಡಲಾಯಿತು. ಸಚಿವ ಈಶ್ವರ ಖಂಡ್ರೆ ಅವರಿಗೆ ಭವನದ ರೂ. 3.6 ಕೋಟಿ ವೆಚ್ಚದ ಮುಂದುವರಿದ ಕಾಮಗಾರಿಗಳ ನೀಲನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ನೀಡಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ,
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ, ಸಂಘದ ಕೇಂದ್ರ ಕಚೇರಿಯ ಖಜಾಂಚಿ ಡಾ. ಸಿದ್ಧರಾಮಣ್ಣ, ಆಂತರಿಕ ಲೆಕ್ಕ ಪರಿಶೋಧಕ ಹರಿಕೃಷ್ಣ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಡಾ. ಶರಣಪ್ಪ ಮುಡಬಿ, ಶೇಕ್ ಮಹಮ್ಮದ್ ಪಟೇಲ್, ಪೀಟರ್, ರಾಜಕುಮಾರ ಬಿರಾದಾರ, ಪಾಂಡುರಂಗ ಬೆಲ್ದಾರ್, ಶಿವರಾಜ ಕಪಲಾಪುರೆ ಮತ್ತಿತರರು ಇದ್ದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಮನೋಹರ ಕಾಶಿ ವಂದಿಸಿದರು.