ಜಿಲ್ಲೆ

ಹರ್ ಘರ್ ತಿರಂಗಾ ಯಶ್ವಸಿಗೊಳಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ಮಂಗಳವಾರದಿಂದ ಆ.15ರವರಗೆ ಜಿಲ್ಲೆಯ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು. ಮೂರು ದಿನದ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಮಂಗಳವಾರದಿಂದ ಮೂರು ದಿನ ಸ್ವಯಂಪ್ರೇರಿತವಾಗಿ ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಅಭಿಯಾನ ನಿಮಿತ್ತ ತಿರಂಗಾ ಯಾತ್ರೆ, ಬೈಕ್ ರ್ಯಾಲಿ, ಮೇಳ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರ್ ಘರ್ ತಿರಂಗಾ ಅಭಿಯಾನ ನಿಮಿತ್ತ ಬುಧವಾರ ಬೆಳಗ್ಗೆ 7ಕ್ಕೆ ಬೀದರ್ ಕೋಟೆಯಿಂದ ಹೊರಡುವ ತಿರಂಗಾ ಯಾತ್ರೆ ಮಹ್ಮದ್ ಗವಾನ್ ಚೌಕ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ ಮಾರ್ಗವಾಗಿ ನೆಹರು ಕ್ರೀಡಾಂಗಣ ತಲುಪಲಿದೆ. 8ಕ್ಕೆ ಸಿದ್ಧಾರೂಢ ಮಠದಿಂದ ಬೈಕ್ ರ್ಯಾಲಿ ಆರಂಭವಾಗಿ ಮೈಲೂರು ಕ್ರಾಸ್, ಕನಕದಾಸ ವೃತ್ತ, ಭಗತಸಿಗ್ ಸರ್ಕಲ್, ಡಾ.ಅಂಬೇಡ್ಕರ್ ಚೌಕ್ ಮೂಲಕ ಕ್ರೀಡಾಂಗಣಕ್ಕೆ ತೆರಳಲಿದೆ ಎಂದು ಮಾಹಿತಿ ನೀಡಿದರು.
ನಂತರ ಬರೀದ್ ಶಾಹಿ ಉದ್ಯಾನವನದಿಂದ ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ಕ್ರೀಡಾಂಗಣವರೆಗೆ ತಿರಾಂಗಾ ಓಟ ಆಯೋಜಿಸಲಾಗಿದೆ. ಅಭಿಯಾನದಲ್ಲಿ ಭಾಗವಹಿಸುವ ಸಾರ್ವಜನಿಕರು ಕ್ರೀಡಾಂಗಣದ ಸೆಲಿ ಪಾಯಿಂಟ್ನಲ್ಲಿ ಸೆಲಿ ಕ್ಲಿಕ್ಕಿಸಿಕೊಂಡು ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಬಹುದು. ಬೆಳಗ್ಗೆ 10ಕ್ಕೆ ಕ್ರೀಡಾಂಗಣದಲ್ಲಿ ತಿರಂಗಾ ಮೇಳ ನಡೆಯಲಿದೆ ಎಂದು ತಿಳಿಸಿದರು.
15ರಂದು ಸಂಜೆ 6ಕ್ಕೆ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇದ್ದರು.