ಬೀದರ್: ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹರ ಘರ್ ತಿರಂಗಾ ಅಭಿಯಾನದ ರಾಜ್ಯ ಸಹ ಸಂಚಾಲಕ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಜಿಲ್ಲೆಯ ಎಲ್ಲ ಮನೆ, ಸಂಘ-ಸಂಸ್ಥೆ ಕಚೇರಿ, ಶಾಲಾ-ಕಾಲೇಜುಗಳ ಮೇಲೆ ಧ್ವಜ ಹಾರಿಸಿ ದೇಶಾಭಿಮಾನದ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದ್ದಾರೆ. ಪ್ರತಿ ವಿಧಾನಸಭೆ ವ್ಯಾಪ್ತಿಯಲ್ಲಿ ತಿರಂಗಾ ಯಾತ್ರೆ, ಬೈಕ್ ರ್ಯಾಲಿ, ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ, ಸ್ಮಾರಕ ಶುಚಿಗೊಳಿಸುವ ಕಾರ್ಯ ಆಯೋಜಿಸಲಾಗುವುದು. ಮಂಗಳವಾರ ಎಲ್ಲ ಬೂತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಕಾರ್ಯ ನಡೆಯಬೇಕು. 14ರಂದು ದೇಶ ವಿಭಜನೆಯ ಕರಾಳ ದಿನಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಜಿಲ್ಲೆಯ ಎರಡು ಹಮ್ಮಿ ಕೊಳ್ಳಲಾಗುವುದು. ರಾಷ್ಟ್ರಧ್ವಜ ಹಾರಿಸಿ ದೇಶಾಭಿಮಾನ ಬಿಂಬಿಸಲು ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.