ಜಿಲ್ಲೆ

ಅಕ್ಷತಾಗೆ ಪ್ರಥಮ ಸ್ಥಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನದ ನಿಮಿತ್ತ ತಾಲ್ಲೂಕಿನ ಕೊಳಾರ(ಕೆ) ಗ್ರಾಮದ ರಾಮಸ್ವಾಮಿ ಪೆರಿಯಾರ್ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ 9ನೇ ತರಗತಿಯ ಅಕ್ಷತಾ ನಾಗಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
10ನೇ ತರಗತಿಯ ಅನಿಷಾ ಮಾಣಿಕ ದ್ವಿತೀಯ ಹಾಗೂ ವೈಷ್ಣವಿ ಶಿವಕುಮಾರ ತೃತೀಯ ಸ್ಥಾನ ಗಳಿಸಿದ್ದಾರೆ.
12 ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ ಸದಾಶಿವ ಅವರ ಪ್ರಾಯೋಜಕತ್ವದಲ್ಲಿ 'ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪಾತ್ರ' ಕುರಿತ
ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಸ್ವಾತಂತ್ರ್ಯೋತ್ಸವ ದಿನ ಕ್ರಮವಾಗಿ ರೂ. 1,501, ರೂ, 1,001 ಹಾಗೂ ರೂ. 501 ನಗದು ಬಹುಮಾನ ವಿತರಿಸಲಾಗುವುದು ಎಂದು ಮುಖ್ಯಶಿಕ್ಷಕ ಸಿದ್ರಾಮ ನಿಜಾಂಪುರೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಶರಗಾರ ಸ್ಪರ್ಧೆಯನ್ನು ಉದ್ಘಾಟಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಮರ ರಾಯಣ್ಣ, ಬೆಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಾಗಶೆಟ್ಟಿ ಗಾದಗೆ, ಶಿಕ್ಷಕ ಅರ್ಜುನ ವರ್ಮಾ, ಆನಂದ ಸೋಲಪುರೆ, ರಾಜಣ್ಣ ಶಂಭು, ಜೈಪ್ರಿಯ, ಶಾಂತಕುಮಾರ, ಶರಣಪ್ಪ ಇದ್ದರು.