ಬೀದರ್: ಶರಣರು, ಸಂತರು ಮತ್ತು ಮಹಾತ್ಮರ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆ.19ರಂದು ನುಲಿಯ ಚಂದಯ್ಯ, 20ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹಾಗೂ 26ರಂದು ಶ್ರೀ ಕೃಷ್ಣ ಜಯಂತಿ ಇದ್ದು, ಮೂರು ಜಯಂತ್ಯುತ್ಸವ ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸೇರಿ ಸಂಬಂಧಿತ ಇಲಾಖೆ ಅಧಿಕಾರಿಗಳು ಜಯಂತಿಗಳಲ್ಲಿ ತಮ್ಮ ತಮ್ಮ ಇಲಾಖೆ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಆಯಾ ಜಯಂತಿ ದಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂತರು, ಶರಣರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಗುವುದು. ನಂತರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ವಾರ್ತಾಧಿಕಾರಿ ಡಾ.ಸುರೇಶ ಜಿ., ಸಮಾಜದ ಮುಖಂಡರಾದ ರಾಜಕುಮಾರ ಅಳ್ಳೆ, ರಾಮಕೃಷ್ಣನ್ ಸಾಳೆ, ಜಗನ್ನಾಥರಡ್ಡಿ, ವೈ. ಮಾಣಿಕರಾವ, ಶಾಂತಕುಮಾರ ಯಾದವ್, ಕೆ. ಸಿದ್ರಾಮೇಶ್ವರ, ಸೂರ್ಯಕಾಂತ ಕಮಠಾಣ ಇತರರಿದ್ದರು.