ಬೀದರ್: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯಗುರು ಹಾಗೂ ಹಿರಿಯ ಮುಖ್ಯಗುರು ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಪ್ರಮುಖರು, 2017ರವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7ನೇ ತರಗತಿವರೆಗೆ ಸಹ ಶಿಕ್ಷಕರೆಂದು ಪರಿಗಣಿಸಬೇಕು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಬೇಕು. ಯಾವ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಗೊಂಡವರಿಗೆ ಪೂರ್ವಾನ್ವಯಗೊಳಿಸಬಾರದು ಎಂದು ಒತ್ತಾಯಿಸಿದರು.
ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಗೊಂಡ ಎಲ್ಲ 1ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಮೊದಲಿನಂತೆ ಅರ್ಹತೆ ಆಧಾರದ ಮೇಲೆ ಪ್ರೌಢ ಶಾಲೆಗೆ ಸೇವಾ ಜ್ಯೇಷ್ಠತೆ ರಕ್ಷಣೆಯೊಂದಿಗೆ ಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ಚುರುಕುಗೊಳಿಸಬೇಕಾದೀತು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ರವೀಂದ್ರರಡ್ಡಿ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ, ಪ್ರಮುಖರಾದ ಪಂಢರಿ ಆಡೆ, ಸಂತೋಷ ಅಕ್ಕಣ್ಣ, ರಾಜು ಸಾಗರ್, ರಾಜಪ್ಪ ನಂದೊಡೆ, ಅಲ್ಲಾವುದ್ದೀನ್ ಪಟೇಲ್, ಶಿವಕುಮಾರ ಓಕಳಿ, ಲಕ್ಷ್ಮಣ ಹೆಂಬಾಡೆ, ನಿರ್ಮಲಾ ಚಲುವಾ, ರಾಜಮತಿ ಕೊರಾಳೆ, ಅಬ್ದುಲ್ ಸತ್ತಾರ್, ರಾಜಪ್ಪ ಜಮಾದಾರ್, ಸಂಜು ಮೇತ್ರಿ, ಬಸವರಾಜ ಪಾಟೀಲ್, ಮುರುಗೇಂದ್ರ ಸಜ್ಜನಶೆಟ್ಟಿ, ಹರಿನಾಥ ಪಾಟೀಲ್, ತಾತೇರಾವ ಕಾಂಬ್ಳೆ ಇತರರಿದ್ದರು.