ಔರಾದ್: ಲಿಂ. ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಮುಷ್ಟಿ ಭಿಕ್ಷೆ ಬೇಡಿ ಅನ್ನದಾಸೋಹವನ್ನು ಮಾಡಿದಂತೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ದುರ್ಗುಣಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ನೀಡಿ ಸುಂದರ ಸಮಾಜ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ಪಟ್ಟಣದ ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮದಲ್ಲಿ ಸಂತಪುರ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಶ್ರೀ ಗುರುಬಸವ ಪಟ್ಟದ್ದೇವರು ಜನ್ಮದಿನ ಪ್ರಯುಕ್ತ ವೃದ್ಧರಿಗೆ ಹಣ್ಣು ವಿತರಿಸಿ ಮಾತನಾಡಿ, ನಿಜಾಮರ ಆಳ್ವಿಕೆಯಲ್ಲಿ ಹೊರಗಡೆ ಉರ್ದು ಬೋಡ್೯ ಹಾಕಿ ಒಳಗಡೆ ಕನ್ನಡ ಕಲಿಸಿದ ಮಠ ಭಾಲ್ಕಿ ಮಠವಾಗಿದೆ. ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯವನ್ನು ಕ್ರಿಯಾಶೀಲ ಗುರು ಗುರುಬಸವ ಪಟ್ಟದ್ದೇವರು ಮಾಡುತ್ತಿದ್ದಾರೆ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು ಧಾರ್ಮಿಕ, ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು.
ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮದ ಅಧ್ಯಕ್ಷೆ ಪಾರಮ್ಮ, ಅಧೀಕ್ಷಕ ನರಸಿಂಗ ವಾಘಮಾರೆ, ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ಜೀತೇಂದ್ರ ಡಿಗ್ಗಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬ್ಳೆ, ವನದೇವಿ ಎಕ್ಕಳೆ ಇದ್ದರು.