ಬೀದರ್: ವರ್ಷದ 12 ತಿಂಗಳಲ್ಲಿ ಶ್ರಾವಣ ಪವಿತ್ರ ಮಾಸ. ಈಗ ಅಧ್ಯಾತ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ವರ್ಷಪೂರ್ತಿ ಮನಸ್ಸಿಗೆ ಹೊಸ ಚೈತನ್ಯ, ಸ್ಫೂರ್ತಿ ಸಿಗುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಮಹಾಲಿಂಗ ಸ್ವಾಮೀಜಿ ಹೇಳಿದರು.
ವಿದ್ಯಾನಗರ ಬಡಾವಣೆಯ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ರಾತ್ರಿ ಶ್ರಾವಣ ನಿಮಿತ್ತ ಆಯೋಜಿಸಿದ್ದ ಒಂದು ತಿಂಗಳ ಬಸವ ದರ್ಶನ ಪ್ರವಚನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಪೂಜೆ, ಧ್ಯಾನ, ಸತ್ಸಂಗಕ್ಕೆ ಶ್ರಾವಣ ಮಾಸ ಮೀಸಲಿಡಬೇಕು ಎಂದರು.
ಶರಣರು, ಮಹಾತ್ಮರ ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ನಿತ್ಯ ಶರಣರ ವಚನಗಳನ್ನು ಅಧ್ಯಯನ ಮಾಡಬೇಕು. ಹಣ, ಸಂಪತ್ತು, ಆಸ್ತಿ ಗಳಿಸುವುದಕ್ಕಿಂತ ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು. ಜ್ಞಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ರಾಜಕುಮಾರ ಹೊಸದೊಡ್ಡೆ ಉದ್ಘಾಟಿಸಿ ಮಾತನಾಡಿ, ಕಾಯಕ, ದಾಸೋಹ ಹಾಗೂ ಸಮಾನತೆ ತತ್ವವನ್ನು ಜಗತ್ತಿಗೆ ಮೊದಲು ನೀಡಿದ್ದು ಶರಣರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವ ಆಡಳಿತ ನೀಡಿದರು ಎಂದರು.
ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎನ್ನುವ ಸಮಾನತೆ ಸಂದೇಶ ನೀಡಿ ಜಾತಿರಹಿತ ಸಮಾಜ, ಸಮಾನತೆ, ಸ್ವಾತಂತ್ರ್ಯ ಮತ್ತು ಸಕಲರಲ್ಲಿ ಮಾನವೀಯ ಮೌಲ್ಯದ ತತ್ವದ ಸಂದೇಶ ಕೊಟ್ಟವರು ಬಸವಣ್ಣನವರು. ಬಸವ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರೆ ಜಗತ್ತು ವಿಶ್ವ ಕುಟುಂಬಿಯಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಪ್ರೊ.ಉಮಾಕಾಂತ ಮೀಸೆ ಮಾತನಾಡಿ, ಶ್ರಾವಣ ಮಾಸ ನಿಮಿತ್ತ ಮಕ್ಕಳಿಗಾಗಿ ವಚನ ಗಾಯನ, ವಚನ ಕಂಠಪಾಠ, ಪ್ರಬಂಧ, ಭಾಷಣ, ಚಿತ್ರಕಲೆ, ರಂಗೋಲಿ ಸ್ಪಧರ್ೆ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಒತ್ತಡ ಜೀವನದಿಂದ ಮುಕ್ತಿ ಹೊಂದಬೇಕಾದರೆ ಶರಣರು, ಸಂತರ ವಾಣಿ ಆಲಿಸಬೇಕು. ಸೆ.3ರವರೆಗೆ ನಿತ್ಯ ಸಂಜೆ 6ಕ್ಕೆ ಪ್ರಸಾದ ನಿಲಯದಲ್ಲಿ ಶ್ರೀ ಮಹಾಲಿಂಗ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಸಾದ ನಿಲಯ ಕಾರ್ಯದರ್ಶಿ ಪ್ರೊ.ಎಸ್.ಬಿ. ಬಿರಾದಾರ್, ಜಿಲ್ಲಾ ಭಾರತೀಯ ಬಸವ ಬಳಗ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧೀಕ್ಷಕ ಬಸವಂತರಾವ ಕಡಗಡ, ಪ್ರಮುಖರಾದ ಸಂಗ್ರಾಮಪ್ಪ ಬಿರಾದಾರ್, ಸಂಗ್ರಾಮ ಎಂಗಳೆ, ಗುರುನಾಥ ಬಿರಾದಾರ್, ಡಾ.ವೈಜಿನಾಥ ಬಿರಾದಾರ್, ಲಿಂಗಶೆಟ್ಟಿ ಬಿರಾದಾರ್, ಬಸವರಾಜ ಹಳ್ಳೆ, ಯಾದಪ್ಪ ಮಡಿವಾಳ, ಶಾಮರಾವ ಮ್ಯಾಕರೆ, ಕಸ್ತೂರಬಾಯಿ ಬಿರಾದಾರ್, ಶಕುಂತಲಾ, ಸವಿತಾ, ತೀರ್ಥಮ್ಮ ಇತರರಿದ್ದರು. ಶ್ರೀಕಾಂತ ಬಿರಾದಾರ್ ಸ್ವಾಗತಿಸಿದರು. ಲಕ್ಷ್ಮೀ ಬಿರಾದಾರ್ ನಿರೂಪಣೆ ಮಾಡಿದರು. ಮೀನಾಕ್ಷಿ ಪಾಟೀಲ್ ವಂದಿಸಿದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳು ವಚನ ನೃತ್ಯ ಪ್ರಸ್ತುತಪಡಿಸಿದರು. ವಚನಶ್ರೀ ನೌಬಾದೆ, ಚನ್ನಬಸಪ್ಪ ನೌಬಾದೆ ವಚನ ಗಾಯನ ನಡೆಸಿಕೊಟ್ಟರು.