ಬೀದರ್: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಸಂಕೇತವಾಗಿ ದೈಹಿಕ ಶಿಕ್ಷಣ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ನಗರದ ಎನ್ಎಫ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಕರ್ತವ್ಯ ನಿರ್ವಹಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರನ್ನೂ ಶಿಕ್ಷಕರೆಂದು ಪರಿಗಣಿಸಿ ಮುಖ್ಯಗುರು ಮುಂಬಡ್ತಿ ಸೇರಿ ಸಹ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಶಿಕ್ಷಕರ ನಡುವೆ ತಾರತಮ್ಯ ಬೆಳೆಯುತ್ತಿದೆ. ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುವ ಜತೆಗೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕ್ರೀಡಾಕೂಟ ಬಹಿಷ್ಕರಿಸುವುದಾಗಿ ಇಲಾಖೆ ಮತ್ತು ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ನಮ್ಮಿಂದ ಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಲಾಗುತ್ತಿದೆ. ಬೇಡಿಕೆ ಈಡೇರದಿದ್ದರೆ ಆ.29ರ ರಾಷ್ಟ್ರೀಯ ಕ್ರೀಡಾ ದಿನದಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಸದಾಫುಲೆ, ಪ್ರಧಾನ ಕಾರ್ಯದರ್ಶಿ ದಿನೇಶ ತಾಂದಳೆ, ತಾಲೂಕು ಅಧ್ಯಕ್ಷ ರಾಬಟ್೯ ಡೇವಿಡ್, ಪ್ರಮುಖರಾದ ಶಿವರಾಜ ಕಣಜಿ, ಪ್ರವೀಣಕುಮಾರ, ಜೈಶೀಲ ಮಾಣಿಕ್, ವೀರಶೆಟ್ಟಿ, ದತ್ತುರಡ್ಡಿ, ಮನೋಹರ ಚವ್ಹಾಣ್, ಸುಭಾಷ ನಾಯಕ್, ಧನರಾಜ ಪವಾರ್, ಗಣಪತಿ ಪವಾರ್, ದಿಲೀಪ ಸೋಲಾಪುರ, ಶ್ರೀಪತಿ ಮೈತ್ರ, ತುಕಾರಾಮ, ಧನರಾಜ ಖೇಣಿ, ಸಂಜಯ ಜಸ್ಸಿ ಇತರರಿದ್ದರು.