ಜಿಲ್ಲೆ

ಮನಸ್ಸಿನ ಶುಚಿಗಾಗಿ ಪ್ರವಚನ ಆಲಿಸಿ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಬಸವಾದಿ ಶರಣರು, ಸಂತರು, ಮಹಾತ್ಮರ ವಾಣಿ ಮತ್ತು ಪ್ರವಚನಗಳು ಮನಸ್ಸು ಶುಚಿಗೊಳಿಸುತ್ತವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನ ಏರ್ಪಡಿಸಿದ್ದ ಅಲ್ಲಮಪ್ರಭು ದೇವರ ವಚನ ದರ್ಶನ ಪ್ರವಚನ ಮತ್ತು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರಾವಣ ಮಾಸ ಪೂರ್ಣ ಶರಣರ ಸಂದೇಶ, ಪ್ರವಚನಗಳನ್ನು ಆಲಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ಈ ಭಾಗದಲ್ಲಿ 40 ವರ್ಷಗಳಿಂದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶ್ರಾವಣ ಮಾಸದಲ್ಲಿ ವಿವಿಧ ಮಹಾತ್ಮರ, ಶರಣರ ಸಾಧನೆ, ಚರಿತ್ರೆ ಕುರಿತು ಒಂದು ತಿಂಗಳು ಪ್ರವಚನದ ಮೂಲಕ ಜ್ಞಾನ ಧಾರೆ ಎರೆಯುತ್ತಿದ್ದಾರೆ. ಈ ಸಲವೂ ಪೂಜ್ಯರು ಅಲ್ಲಮಪ್ರಭು ದೇವರ ವಚನ ದರ್ಶನ ಕುರಿತ ಪ್ರವಚನ ದಯಪಾಲಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಬೀದರ್ ರೋಟರಿ ಕ್ಲಬ್ ಅಧ್ಯಕ್ಷ ಸಂಗಮೇಶ ಆಣದೂರೆ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಮನದಲ್ಲಿ ದೈವಿಗುಣ ಸಾಧಿಸಲು ಪ್ರವಚನ ಸಹಕಾರಿ. ನಮ್ಮಲ್ಲಿನ ಕಾಮ, ಕ್ರೋಧ, ಮದ, ಮತ್ಸರ ಮತ್ತು ದುರ್ಗುಣ ನಿರ್ಮೂಲನೆಗೊಳಿಸಿ ದೇವಮಾನವಾಗಿ ಮಾಡುವ ಅದ್ಭುತ ಶಕ್ತಿ ಮಹಾತ್ಮರು, ಪೂಜ್ಯರ ವಾಣಿಯಲ್ಲಿದೆ ಎಂದು ಹೇಳಿದರು.
ಎಷ್ಟೇ ಒತ್ತಡದಲ್ಲಿದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು ಪಟ್ಟದ್ದೇವರು ತಿಂಗಳ ಪರ್ಯಂತ ನಡೆಸಿಕೊಡುವ ಪ್ರವಚನದ ಮೂಲಕ ದಯಪಾಲಿಸುವ ದಿವ್ಯವಾಣಿ ಆಲಿಸಿ ಬದುಕು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಕೋರಿದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರವಚನ ಮೂಲಕ ನಿರಂತರ ಈ ಭಾಗದ ಭಕ್ತರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರವಚನ ಮನಸ್ಸು ಅರಳಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪೂಜ್ಯರು ಭಾಲ್ಕಿ ಚನ್ನಬಸವಾಶ್ರಮದಲ್ಲಿ ನಡೆಸಿಕೊಡುವ ಪ್ರವಚನ ಆಲಿಸಿ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಶ್ರಾವಣ ಮಾಸ ಸೇವಾ ಸಮಿತಿ ಅಧ್ಯಕ್ಷೆ ನಿರ್ಮಲಾ ಚಂದ್ರಕಾಂತ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಮಾಜಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟ ಉಪಾಧ್ಯಕ್ಷ ಜ್ಯೋತಿಬಾ ಕಮ್ಮಾರ, ಪ್ರಧಾನ ಕಾರ್ಯದರ್ಶಿ ಮಂಜಣ್ಣ ಕಮ್ಮಾರ, ಬೆಂಗಳೂರು ಕಮ್ಮಾರ ಸಮಾಜದ ಅಧ್ಯಕ್ಷ ಟಿ.ನಾಗರಾಜು, ಕಲಬುರಗಿ ಸಮಾಜ ಸೇವಕ ಅಪ್ಪಣ್ಣ, ವಿಜಯಪುರದ ಶಿವಲಿಂಗ ಯರಗಲ್ಲ, ಹಿರಿಯ ಸಾಹಿತಿ ವೀರಣ್ಣ ಕುಂಬಾರ ಇತರರಿದ್ದರು.
ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಗ್ರಂಥ ಪರಿಚಯ ಮಾಡಿಕೊಟ್ಟರು. ದೀಪಕ ಠಮಕೆ ನಿರೂಪಣೆ ಮಾಡಿದರು.

ಗ್ರಂಥ ಲೋಕಾರ್ಪಣೆ
ಹಿರಿಯ ಸಾಹಿತಿ ವೀರಣ್ಣ ಕುಂಬಾರ ರಚಿತ ಕುಂಬಾರಣ್ಣನ ವಚನಗಳು ಮತ್ತು ಸಾವಿರದ ಲಿಂಗ ನುಡಿಗಳು ಮತ್ತು ಡಾ.ಸೋಮನಾಥ ಯಾಳವಾರ ರಚಿತ ಮಹಾಶರಣ ಕಮ್ಮಾರ ಕಲ್ಲಯ್ಯ ಗ್ರಂಥಗಳನ್ನು ನಿಟ್ಟರಹಳ್ಳಿ ನಿಜಶರಣ ಕಮ್ಮಾರ ಕಲ್ಲಯ್ಯ ಮಠದ ಪೀಠಾಧ್ಯಕ್ಷ ಶ್ರೀ ಡಾ.ನೀಲಕಂಠ ಶಿವಾಚಾರ್ಯ ಲೋಕಾರ್ಪಣೆಗೊಳಿಸಿದರು.