ಹುಮನಾಬಾದ್: ಹಳ್ಳಿಖೇಡ(ಬಿ)ಗ್ರಾಮದ ಶ್ರೀ ಸರ್ವೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದಿಂದ ಒಂದು ವಾರದ ಅಭಿಷೇಕ ಸಪ್ತಾಹ ಸಮಾರೋಪ ನಿಮಿತ್ತ ಮಂಗಳವಾರ ಮಹಾಪ್ರಸಾದ ವಿತರಣೆ ಹಾಗೂ ಬುಧವಾರ ವೈಭವದ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ವಿಶೇಷ ಪೂಜೆ ನಂತರ ಪಲ್ಲಕ್ಕಿ ಮೆರವಣಿಗೆ ದೇವಾಲಯದಿಂದ ಶ್ರೀ ಲಕ್ಷ್ಮೀ ಮಂದಿರ, ಪ್ರಮುಖ ರಸ್ತೆಗಳ ಮಾರ್ಗವಾಗಿ ಹನುಮನ ಮಂದಿರವರೆಗೆ ಸಂಚರಿಸಿ ಪುನಃ ದೇವಾಲಯಕ್ಕೆ ತಲುಪಿತು. ಭಜನೆಯೊಂದಿಗೆ ಸಮಾಜದ ಪ್ರಮುಖರು, ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಮಾರ್ಗದುದ್ದಕ್ಕೂ ರಸ್ತೆ ಬದಿಯ ಮನೆ, ಅಂಗಡಿಗಳ ಎದುರು ಜನರು ಪಲ್ಲಕ್ಕಿಗೆ ಆರತಿ ಬೆಳಗಿ ದರ್ಶನ ಪಡೆದರು.
ಏಳು ದಿನವರೆಗೆ ದಿನದ 24 ತಾಸು ಮೂರು ಗಂಟೆಗೆ ಇಬ್ಬರಂತೆ ನಿರಂತರ ಅಭಿಷೇಕ ನಡೆಸುವುದರ ಜತೆಗೆ ನಿತ್ಯ ಊರಲ್ಲಿ ಜೋಳಿಗೆ ಸಂಚಾರದ ನಂತರ ದೇವಾಲಯದಲ್ಲಿ ಪ್ರಸಾದ ವಿತರಿಸಲಾಯಿತು. ಸಮಾರೋಪ ನಿಮಿತ್ತ ದೇವಾಲಯದಲ್ಲಿ ಮಂಗಳವಾರ ಶ್ರೀ ಸರ್ವೇಶ್ವರ ಮೂರ್ತಿಗೆ ಅನ್ನಪೂಜೆ, ಪುಷ್ಪಾಲಂಕಾರ ಪೂಜೆ ನಂತರ ನಡೆದ ಮಹಾ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಸ್ಥಳೀಯರು ಸೇರಿ ಸುತ್ತಲಿನ ಹಳ್ಳಿಗಳ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.
ಸಮಾಜದ ಮುಖಂಡ, ಜಿಪಂ ಮಾಜಿ ಸದಸ್ಯ ಕೇಶವರಾವ ಮಹಾರಾಜ ತಳಘಟಕರ್ ನೇತೃತ್ವದ ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಿಂಹ ದೀಕ್ಷಿತ್, ಪಾಂಡುರಂಗ ದೀಕ್ಷಿತ್, ಬಳವಂತ ಜೋಶಿ, ಗುರುನಾಥ ದೀಕ್ಷಿತ್, ಶಿವರಾಮ ದೀಕ್ಷಿತ್, ದೇವಿದಾಸ ದೀಕ್ಷಿತ್, ವಿವೇಕ ಕುಲಕರ್ಣಿ, ಸಂಜು ಪಟವಾರಿ, ಭಗವಂತ ಬೋತಗಿ, ಜೈರಾಮರಾವ, ಮಧುಕರ ದೇಶಪಾಂಡೆ, ಜೈರಾವ ಕುಲಕರ್ಣಿ, ಕಲ್ಯಾಣರಾವ ಜೋಶಿ, ದತ್ತಾತ್ರೇಯ ಜೋಶಿ, ಬಲಭೀಮ ಜೋಶಿ, ಸ್ನೇಹಿತ ಜೋಶಿ, ಅವಧೂತ ಜೋಶಿ, ಸಂತೋಷ ಚಾಳಕಾಪುರ, ಶಿವಾಜಿ ಪೋಷನಗೀರ ಇತರರಿದ್ದರು.