ಔರಾದ್: ಮೂಕ ಪ್ರಾಣಿಗಳಿಗೂ ಆರೋಗ್ಯ ಸೇವೆ ಸಿಗಬೇಕು. ಅವುಗಳ ರಕ್ಷಣೆಯಾಗಬೇಕು ಎಂಬ ಸದಾಶಯದೊಂದಿಗೆ ಹೈಟೆಕ್ ಪಶು ಆಸ್ಪತ್ರೆ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದಲ್ಲಿ 3.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಪಶು ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಪಶು ಚಿಕಿತ್ಸಾ ಕೇಂದ್ರದಲ್ಲಿ ಲ್ಯಾಬ್, ಆಪರೇಷನ್ ಥೇಟರ್, ಎಕ್ಸರೇ ಸೇರಿದಂತೆ ಜಾನುವಾರುಗಳ ಚಿಕಿತ್ಸೆಗೆ ಬೇಕಿರುವ ಎಲ್ಲ ಸೌಕರ್ಯಗಳು ಇವೆ ಎಂದು ಹೇಳಿದರು.
ಎಲ್ಲ ಕಾರ್ಯಕ್ರಮಗಳಿಗೂ ಮುನ್ನ ಗೋಮಾತೆ ಪೂಜಿಸುತ್ತೇವೆ. ಅದರಂತೆ ಗೋಮಾತೆಗೆ ಪೂಜೆ ನೆರವೇರಿಸಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಮೂಕ ಪ್ರಾಣಿಗಳ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಲಭಿಸಬೇಕು. ಗೋಮಾತೆ ಒಳಗೊಂಡು ಎಲ್ಲ ಜಾನುವಾರುಗಳ ಸಂರಕ್ಷಣೆಯಾಗಬೇಕು ಎಂಬ ಸದಾಶಯದೊಂದಿಗೆ ಕೆಲಸ ಮಾಡುತ್ತಿದ್ದು, ಈ ಹಿಂದೆ ಪಶು ಸಂಗೋಪನಾ ಸಚಿವನಾಗಿದ್ದ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಹಲವಾರು ಕೆಲಸ ಮಾಡಿರುವೆ ಎಂದರು.
ಕ್ಷೇತ್ರದ ಜನತೆಯ ಆಶೀರ್ವಾದದಿಂದಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಅವರ ನಿರೀಕ್ಷೆಯಂತೆ ಕ್ಷೇತ್ರವನ್ನು ಸವಾರ್ಂಗೀಣ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದೇನೆ. ಹೆಡಗಾಪುರದಲ್ಲಿ ಜಾನುವಾರು ತಳಿ ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರ ಶೀಘ್ರ ನಿರ್ಮಾಣವಾಗಲಿದೆ. ಸಿಪೆಟ್ ಕೇಂದ್ರದ ಕೆಲಸವನ್ನೂ ಆರಂಭಿಸಲಾಗುವುದು. ಅದರಂತೆ ಕ್ಷೇತ್ರದಲ್ಲಿ ಅಂಬೇಡ್ಕರ್, ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ರಸ್ತೆ, ಕುಡಿಯುವ ನೀರು ಪೂರೈಕೆ ಒಳಗೊಂಡು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಜಾನುವಾರುಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ ಹಿಂದೆ ನಾನು ಸಚಿವನಾಗಿದ್ದ ಆರಂಭಿಸಿದ ಪಶು ಸಂಜೀವಿನಿ ಆಂಬುಲೆನ್ಸ್, ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ, ಗೋಶಾಲೆಗಳ ನಿರ್ಮಾಣ ಸೇರಿದಂತೆ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದಿನ ಎಲ್ಲ ಯೋಜನೆ ಆರಂಭಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಫಾಹಿಮ್ ಖುರೇಶಿ, ಮುಖಂಡರಾದ ಸುರೇಶ ಭೋಸ್ಲೆ, ಶಿವಾಜಿರಾವ ಪಾಟೀಲ್ ಮುಂಗನಾಳ, ಶಿವಾಜಿರಾವ ಕಾಳೆ, ರಂಗರಾವ ಜಾಧವ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ್, ಶಿವರಾಜ ಅಲ್ಮಾಜೆ, ಕೇರಬಾ ಪವಾರ್, ಖಂಡೋಬಾ ಕಂಗಟೆ, ಸಂತೋಷ ಪೋಕಲವಾರ್, ಸಂಜು ವಡೆಯರ್, ಶಿವಕುಮಾರ ಪಾಂಚಾಳ, ಸಾಗರ್ ಪಾಟೀಲ್, ವಿನಾಯಕ ಜಗದಾಳೆ, ಬಾಬುರಾವ ತೋರ್ಣಾವಾಡಿ, ಅಶೋಕ ಅಲ್ಮಾಜೆ, ಯೋಗೇಶ್ ಪಾಟೀಲ್, ಪ್ರದೀಪ್ ಪವಾರ್, ರವೀಂದ್ರರಡ್ಡಿ, ಸಚಿನ್ ಬಿರಾದಾರ್, ಗಣೇಶ ಕಾರೆಗಾವೆ, ಪ್ರವೀಣ ಕಾರಬಾರಿ, ಭರತ ಕದಂ, ರಾಜೇಂದ್ರ ಮಾಳಿ, ಸುಜಿತ ರಾಠೋಡ್ ಇತರರಿದ್ದರು.