ಭಾಲ್ಕಿ: ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಜನಪ್ರತಿನಿಗಳು, ಸರ್ಕಾರ ಕಾಳಜಿ ವಹಿಸಿ ಭವನ ನಿರ್ಮಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಶ್ರೀ ಮೈಲಾರ ಮಲ್ಲಣ್ಣ ಮಂದಿರದ ಮಾಜಿ ಅಧ್ಯಕ್ಷ ಕೆ.ಡಿ. ಗಣೇಶ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಡಿ.ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಪತ್ರಿಕಾ ಭವನ ಕಾರ್ಯ ನನೆಗುದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಭವನ ನಿರ್ಮಿಸಿ, ಪತ್ರಕರ್ತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ದೇಶದ ಗಡಿಯನ್ನು ಸೈನಿಕರು ಕಾಯುವಂತೆ ದೇಶದ ಒಳಗೆ ಆಗು ಹೋಗುಗಳನ್ನು ನೈಜವಾಗಿ ಜನರ ಮುಂದಿಡುವ ಪ್ರಯತ್ನ ಪತ್ರಕರ್ತರು ಮಾಡುತ್ತಿದ್ದಾರೆ. ಪತ್ರಕರ್ತರ ಸೇವೆಗೆ ಪ್ರೋತ್ಸಾಹ ತುಂಬುವ ಕೆಲಸ ಆಗಬೇಕು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಜಯರಾಜ ದಾಬಶೆಟ್ಟೆ ಉದ್ಘಾಟಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ, ಹಿರಿಯ ಪತ್ರಕರ್ತ ಅಶೋಕ ರಾಜೋಳೆ ಮಾತನಾಡಿದರು.
ಕೆ.ಡಿ. ಫೌಂಡೇಶನ್ ಅಧ್ಯಕ್ಷೆ ಅಂಜಲಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಚಂದ್ರಶೇಖರ ಎಮ್ಮೆ, ಬಸವರಾಜ ಪ್ರಭಾ, ಫೌಂಡೇಶನ್ ಉಪಾಧ್ಯಕ್ಷ ರಂಜಿತ ಮಳಚಾಪುರೆ, ಖಜಾಂಚಿ ಮಾಣಿಕ ಮಳಚಾಪುರೆ, ಕಸಾಪ ನಗರ ಘಟದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ಮಾಳಸ್ಕಾಂತ ವಾಘೆ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿ, ವಂದಿಸಿದರು.