ಹುಮನಾಬಾದ್: ಅದೊಂದು ವಿಶಿಷ್ಟ ಮತ್ತು ಅಪರೂಪದ ಕಾರ್ಯಕ್ರಮ. 35 ವರ್ಷಗಳ ಹಿಂದೆ ಅಕ್ಷರ ಕಲಿಸಿದ ಮತ್ತು ತಮ್ಮ ಜೀವನವನ್ನು ರೂಪಿಸಿದ ಗುರು ಬಳಗಕ್ಕೆ ಕೃತಜ್ಞತೆ ಅರ್ಪಿಸುವ ವಿನೂತನ ಸಮಾರಂಭ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿತು.
ಪಟ್ಟಣದ ಪಿವೈಸಿ ಕ್ಲಬ್ ಸಭಾಂಗಣದಲ್ಲಿ ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 1989ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ವಿನೂತನವಾಗಿ ಜರುಗಿದ್ದು ವಿಶೇಷವಾಗಿತ್ತು. 35 ವರ್ಷಗಳ ಬಳಿಕ
ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ಆಗಮಿಸಿ, ಶಿಕ್ಷಣದ ಮೂಲಕ ಜ್ಞಾನ ದಾಹೋಹ ಮಾಡಿದ ಗುರುಗಳಿಗೆ ಸ್ವಾಗತಿಸಿಸಲು ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಪುಷ್ಪವೃಷ್ಠಿಯೊಂದಿಗೆ ಬರಮಾಡಿಕೊಂಡಿದ್ದು ಕಣ್ಮನ ಸೆಳೆಯಿತು. ವೇದಿಕೆಯಲ್ಲಿ ಎಲ್ಲ ಶಿಕ್ಷಕರಿಗೆ ಮೈಸೂರು ಪೇಟ್ ತೋಡಿಸಿ ಸ್ಮರಣಿಕೆ ನೀಡಿ ಸನ್ಮಾನಿಸುವ ಮೂಲಕ ಗುರು ಆರ್ಶೀವಾದ ಪಡೆದ ಎಲ್ಲ ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ಬಾಲ್ಯ ಜೀವನದ ಮೇಲುಕು ಹಾಕಿ ಸಂಭ್ರಮಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ ಬಂಡೆಪ್ಪ ಖೂಬಾ ಮಾತನಾಡಿ, ಇಡೀ ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಸಂಬಂಧ ಅತ್ಯಂತ ಮಹತ್ವದಾಗಿದೆ. 34 ವರ್ಷದ ಎಲ್ಲ ಹಳೆಯ ವಿದ್ಯಾರ್ಥಿಗಳು ಒಂದು ಕಡೆ ಸೇರಿ ಶಿಕ್ಷಣ ನೀಡಿದ ಎಲ್ಲ ಶಿಕ್ಷಕರನ್ನು ಭ್ಯವವಾಗಿ ಸ್ವಾಗತದೊಂದಿಗೆ ಸನ್ಮಾನಿಸಿ ಗುರು ಕಾಣಿಕೆ ಸಲ್ಲಿಸಿರುವುದು ಗಮನಿಸಿದರೆ ಗುರುವಿನ ಸ್ಥಾನಕ್ಕೆ ಈಗಲೂ ಶ್ರೇಷ್ಠ ಗೌರವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಮ್ಮ ಕೈಯಲ್ಲಿ ಕಲಿತ ಎಲ್ಲರೂ ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಗೌರವದ ಜೀವನ ಸಾಗಿಸುತ್ತಿರುವುದು ಖುಷಿಯಾಗಿದೆ ಎಂದರು.
ನಿವೃತ್ತ ಶಿಕ್ಷಕರಾದ ಸಿದ್ದಯ್ಯ ಒಡೆಯರ್, ಗಂಗಾಧರಯ್ಯ, ಗುಂಡಪ್ಪ ಸಜ್ಜನಶೆಟ್ಟಿ, ಅನುರಾಧಾ, ಮಾಣಿಕರಾವ ಸಾಲಿವಾಲೆ, ಅಶೋಕಕುಮಾರ ಕುಲಕರ್ಣಿ, ಯುಸೂಫ್ಖಾನ್, ಗೋಪಾಲರಾವ ಚವ್ಹಾಣ್ ಇತರರು ಮಾತನಾಡಿ, ಶಿಷ್ಯರಿಂದ ಪಡೆದ ಗೌರವ ಅವಿಸ್ಮರಣೀಯ. ಅಕ್ಷರ ಕಲಿಸಿದ ಗುರುಗಳಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಇಂದಿನ ಸನ್ಮಾನದಿಂದ ನಮಗೆ ಇಳಿ ವಯಸ್ಸಿನಲ್ಲಿಯೂ ಉತ್ಸಾಹಕ್ಕೆ ಕಾರಣವಾಗಿದೆ. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಸೇವೆ ಸಲ್ಲಿಸಲಿ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳು ಮಾತನಾಡಿ, ಗುರುಗಳ ಒಡನಾಟ, ಶಿಕ್ಷಣ ಸ್ಮರಿಸಿದರು. ಹಳೆಯ ವಿದ್ಯಾರ್ಥಿಗಳಾದ ಸಂಗಮೇಶ ಜಾಜಿ, ಅನೀತಾ ಪೊಲ್ದಾಸ್, ಸುರೇಶ ಕಮಲಾಪುರಕರ್, ಚಿದಾನಂದ ಪತ್ರಿ, ಉದಯಕುಮಾರ ಹೆಗ್ಗಣ್ಣಿ, ಬಾಬು ಟೈಗರ್, ಗಿರೀಶ್ ಪಾಟೀಲ್, ಶಿವಕುಮಾರ ಕನ್ನಾ, ರಾಜು ಅಂಬ್ರಿ, ಬಸವರಾಜ ಭಾವಿ, ರಾಜು ಯಲಾಲ್, ಶಾಂತಕುಮಾರ ರಾಠೋಡ್, ಸುರೇಶ ಖೇರೋಜಿ, ಸಂಜೀವ್ ಸೂಗರೆ, ರಾಜು ಪಂಡು, ರವಿ ಪಲ್ಲೇರಿ, ಮಾರುತಿ, ಅಶೋಕ ಕೋರಿ, ಮಲ್ಲು ನಾವದಗಿ, ಗುರು ಪಾಟೀಲ್, ಸುಜೀತ್ ಜಡೇನವರ್, ಸಂಜಯ ಯಾದವ್, ಮಲ್ಲಮ್ಮ ಪಾಟೀಲ್, ರವಿಕುಮಾರ ಪರಮಶೆಟ್ಟಿ, ರಾಜು ಕುಂಬಾರ, ಬಸಯ್ಯ ಸ್ವಾಮಿ, ವೀರಣ್ಣ ಚಾಂಗಲೇರಿ, ಅಶೋಕ ದಾಮಾ ಇತರರಿದ್ದರು.