ಜಿಲ್ಲೆ

ಸುಂದರ ಬದುಕಿಗೆ ಅಪ್ಪಣ್ಣ ವಚನ ದಾರಿದೀಪ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಸುಂದರ ಜೀವನ ಹಾಗೂ ಸಮರ್ಥ ರೀತಿಯಲ್ಲಿ ಬದುಕನ್ನು ನಡೆಸಿಕೊಂಡು ಹೋಗಲು 12ನೇ ಶತಮಾನದ ಶರಣ ಹಡಪದ ಅಪ್ಪಣ್ಣ-ಲಿಂಗಮ್ಮನವರ ವಚನಗಳು ಸರ್ವರಿಗೂ ದಾರಿ ದೀಪವಾಗಿವೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಪೂಜ್ಯ ಜಗದ್ಗುರು ಡಾ.ಗಂಗಾದೇವಿ ಹೇಳಿದರು.
ಬಸವೇಶ್ವರ ವೃತ್ತದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಹಡಪದ ಅಪ್ಪಣ್ಣ-ಲಿಂಗಮ್ಮನವರ ಜಯಂತ್ಯುತ್ಸವದಲ್ಲಿ ಮಾತನಾಡಿ, ದುರ್ಗುಣ, ದುರ್ವಿಚಾರಗಳಿಂದ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ. ನಿರ್ಮಲ ಮನಸ್ಸಿನಿಂದ ಮಾತ್ರ ಪರಮಾತ್ಮನನ್ನು ಕಾಣಬಹುದು. ಜಗತ್ತಿನ ಎಲ್ಲ ಧರ್ಮದವರಿಗೂ ಬಸವಣ್ಣನವರು ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿ ಮಾದರಿಯಾಗಿದ್ದರು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಹಡಪದ ಅಪ್ಪಣ್ಣ-ಲಿಂಗಮ್ಮನವರು ದೇಹ ಎರಡಾದರೂ ಮನಸ್ಸು ಒಂದೇ. ಇವರ ವಚನಗಳಲ್ಲಿ ಕೌಶಲ, ಸರಳತೆ, ಸಹಜತೆಗಳನ್ನು ಕಾಣಬಹುದು. ಆತ್ಮಶುದ್ಧಿ, ನಿರ್ಮಲ ಭಕ್ತಿ, ನಡೆ-ನುಡಿಯಲ್ಲಿ ಶುದ್ಧತೆಯನ್ನು ಪ್ರತಿಪಾದಿಸಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಲಿಂಗವನ್ನು ನೋಡಿ ಅದರಲ್ಲಿಯೇ ತಲ್ಲೀನರಾಗಿರುತ್ತಿದ್ದರು. ಲಿಂಗಮ್ಮ ತಾಯಿಯವರು ಜಗತ್ತು ಕಂಡ ಶ್ರೇಷ್ಠ ಯೋಗಿಣಿಯಾಗಿದ್ದರು. ಅವರ 114 ವಚನಗಳು ದೊರಕಿವೆ ಎಂದು ಹೇಳಿದರು.
ಕೃಷಿ ಅಧಿಕಾರಿ ಬಸವಪ್ರಭು ಮಡಾರ ಉದ್ಘಾಟಿಸಿದರು. ಹಡಪದ ಅಪ್ಪಣ್ಣ ಸಮಾಜ ನೌಕರರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಡಿಗ್ಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಯುವ ಘಟಕದ ತಾಲೂಕಾಧ್ಯಕ್ಷ ಸಂತೋಷ ಹಡಪದ, ನಿವೃತ್ತ ಡೀನ್ ಅಮರನಾಥ ಸೋಲಪುರೆ, ಚನ್ನಪ್ಪ ಈಜಾರೆ, ವಿಜಯಲಕ್ಷ್ಮೀ ದಾವಲಜಿ ಇತರರಿದ್ದರು.
ಗಣೇಶ ಜಂಗೆ ವಚನ ಪಠಣ ಮಾಡಿದರು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಶಿವರಾಜ ನೀಲಕಂಠೆ ಸ್ವಾಗತಿಸಿದರು. ದತ್ತಾತ್ರೆ ಮೂಲಗೆ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ 36 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಜಗನ್ನಾಥ ಹೆಬ್ಬಾಳೆ ದಂಪತಿಗಳನ್ನು ಸನ್ಮಾನಿಸಲಾಯಿತು.