ಬೀದರ್: ಜಿಲ್ಲಾದ್ಯಂತ ಈಚೆಗೆ ಸುರಿದ ಮಳೆಯಿಂದ ಹಾನಿಯಾದ ಮನೆಗಳಿಗೆ ಎನ್ ಡಿಆರ್.ಎಫ್ ನಿಯಮದಂತೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಈಶ್ವರ ಖಂಡ್ರೆ ಹೇಳಿದರು.
ಖಾಶೆಂಪುರ, ಕಾಡವಾದ ಹಾಗೂ ಚಟ್ನಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಮನೆ ಹಾಗೂ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಬಹಳಷ್ಟು ಜನರ ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ತಕ್ಷಣ 6500 ರೂ. ಹಾಗೂ ಅದರ ಜತೆ 50 ಸಾವಿರ ರೂ. ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಪೂರ್ಣ ಪ್ರಮಾಣದ ಹಾನಿಗೊಳಗಾದ ಮನೆಗಳಿಗೆ ಎನ್ಡಿಆರ್ಎಫ್ ಮತ್ತು ಎಸ್.ಡಿಆರ್.ಎಫ್ ನಿಯಮದ ಪ್ರಕಾರ 1.25 ಲಕ್ಷ ರೂ. ಪರಿಹಾರ ಮತ್ತು ಒಂದು ಪಕ್ಕಾ ಮನೆ ನಿರ್ಮಿಸಿ ಕೊಡಲು ಈಗಾಗಲೇ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಆದೇಶವು ಕೆಲವು ದಿನಗಳಲ್ಲಿ ಜಾರಿಯಾಗಲಿದೆ ಎಂದು ಹೇಳಿದರು.
ಬೆಳೆ ಹಾನಿಯಾದ ಖಾಶೆಂಪುರ ಹಾಗೂ ಕಾಡವಾದ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ಬೆಳೆ ಹಾನಿಯಾದಂಥ ಜಮೀನುಗಳ ಸರ್ವೇ ಮಾಡಿ ಸರ್ಕಾರಕ್ಕೆ ನಿಖರ ವರದಿ ಸಲ್ಲಿಸಬೇಕು. ಸಕಾಲಕ್ಕೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೋದ್ದಿನ್, ಜಿಲ್ಲಾಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಪ್ರದೀಪ್ ಗುಂಟಿ, ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಮುಖಂಡರಾದ ಅಮೃತರಾವ ಚಿಮಕೋಡೆ, ಚಂದ್ರಶೇಖರ ಚನ್ನಶೆಟ್ಟಿ, ತಹಸೀಲ್ದಾರ್ ದಿಲಶಾನ್ ಮೇಹತ್ ಇತರರಿದ್ದರು.