ಜಿಲ್ಲೆ

ಸಾಹಿತ್ಯ ಓದುವ ಹವ್ಯಾಸ ಬೆಳೆಯಲಿ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ದಿನೇದಿನೆ ಕಮ್ಮಿಯಾಗುತ್ತಿದೆ. ಪ್ರತಿಯೊಬ್ಬರೂ ಸಾಹಿತ್ಯ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಏರ್ಪಡಿಸಿದ್ದ ಶರಣ ಕುಂಬಾರ ಗುಂಡಯ್ಯ ಜಯಂತ್ಯುತ್ಸವ, 301ನೇ ಮಾಸಿಕ ಶರಣ ಸಂಗಮ ಮತ್ತು ಮನದ ಮಂದಾರ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಆಧುನಿಕತೆಯಲ್ಲಿ ಒತ್ತಡದ ಜೀವನ ಸಾಗಿಸುತ್ತಿರುವ ಎಲ್ಲರಲ್ಲಿಯು ಸಾಹಿತ್ಯ ಓದುವ ಅಭಿರುಚಿ ಕಡಿಮೆ ಆಗುತ್ತಿದೆ. ಇದರಿಂದ ಜ್ಞಾನದಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ನಮ್ಮ-ನಿಮ್ಮೆಲ್ಲರ ಜೀವನದ ಬೆಳವಣಿಗೆಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಸಾಹಿತ್ಯದ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾನವನ ಬದುಕು ಸಾರ್ಥಕ್ಯ ಪಡೆಯಲು ಶರಣರ ಸಂಗ ಮಹತ್ವದ ಸಾಧನೆಯಾಗಿದೆ. ಪ್ರತಿ ತಿಂಗಳು ನಡೆಯುವ ಶರಣ ಸಂಗಮ ಭಾಲ್ಕಿಯಲ್ಲಿ ಶರಣ ಸಂಸ್ಕೃತಿ ವಾತಾವರಣ ಮೂಡಿಸಿದೆ. ಈ ಮೂಲಕ ಶರಣರ ದಿವ್ಯ ಜೀವನ ಮತ್ತು ವಚನ ಸಾಹಿತ್ಯ ಅರಿಯಲು ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ ಎಂದರು.
ಪ್ರೊ.ಶಂಭುಲಿಂಗ ಕಾಮಣ್ಣ ರಚಿತ ಮನದ ಮಂದಾರ ಕೃತಿ ಅತ್ಯುತ್ತಮವಾಗಿದೆ. ಪ್ರತಿಯೊಬ್ಬರೂ ಈ ಕೃತಿಯನ್ನು ಓದಬೇಕು ಎಂದು ಕಿವಿಮಾತು ಹೇಳಿದರು.
ನೇತೃತ್ವ ವಹಿಸಿದ್ದ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಮಾಜದ ಎಲ್ಲ ಸಮುದಾಯಗಳು ಶರಣರ ಸಮಾನತೆ ನೆಲೆಗಟ್ಟಿನಲ್ಲಿ ಒಂದಾಗುವುದು ಪ್ರಸ್ತುತ ಬಹಳ ಅವಶ್ಯಕವಾಗಿದೆ. ಬಸವಣ್ಣನವರು ಹೇಳಿದ ಕಾಯಕ ಮತ್ತು ದಾಸೋಹ ತತ್ವ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.
ಸಿಂಧನಕೇರಾ ಶಿಕ್ಷಕ ವೀರಣ್ಣ ಕುಂಬಾರ ಉಪನ್ಯಾಸ ನೀಡಿದರು. ಜಯಪ್ರಕಾಶ ಕುಂಬಾರ ಅಧ್ಯಕ್ಷತೆ ವಹಿಸಿದರು. ಪ್ರೊ.ಶಂಭುಲಿಂಗಕಾಮಣ್ಣ, ವಿದ್ಯಾವತಿ ಅಷ್ಟೂರೆ, ನಿರ್ಮಲಾ ಚಂದ್ರಕಾಂತ ಪಾಟೀಲ್, ಸುಧಾ ವಿಜಯಕುಮಾರ ಇತರರಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಸುನೀಲಕುಮಾರ ಹೊನ್ನಾಳೆ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಶಾಂತಾಬಾಯಿ ವೈಜಿನಾಥ ಕುಂಬಾರ ವಚನ ಸಂಗೀತ ನಡೆಸಿಕೊಟ್ಟರು. ವಿ.ಸಿದ್ಧರಾಮಣ್ಣ ಶರಣರು ರಚಿತ ದಿವ್ಯಾಂಜಲಿ ನಿರ್ದೇಶನದ ಗುರುಪ್ರಸಾದ ಶಾಲೆಯ ಮಕ್ಕಳು ಅಭಿನಯಿಸಿದ ಶರಣ ಕುಂಬಾರ ಗುಂಡಯ್ಯ ರೂಪಕ ಜನರ ಗಮನ ಸೆಳೆಯಿತು. ದೀಪಕ್ ಢಮಕೆ ನಿರೂಪಣೆ ಮಾಡಿದರು. ಶಾಂತಯ್ಯ ಸ್ವಾಮಿ ವಂದಿಸಿದರು.