ಬೀದರ್: ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶರಣ ಹಡಪದ ಅಪ್ಪಣ್ಣ ಅವರು ಅನೇಕ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಹೇಳಿದರು.
ಇಲ್ಲಿನ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಶರಣ ಸಂಗಮ, ಗುರುಪೂರ್ಣಿಮೆ ಹಾಗೂ ಶರಣ ಹಡಪದ ಅಪ್ಪಣ್ಣ-ಲಿಂಗಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಕಲ್ಯಾಣ ವಾಸದಿಂದ ಸಂಗಮದ ಐಕ್ಯದವರೆಗೆ ಸತತ ಬಸವಣ್ಣವರ ಸಾನ್ನಿಧ್ಯದಲ್ಲಿ ಮನೆ ಮಗನಾಗಿ ಬೆಳೆದು ಜಗತ್ತು ಬೆಳಗಿದ ಮಹಾಶರಣ ಅಪ್ಪಣ್ಣನವರು. ಲಿಂಗಮ್ಮ ತಾಯಿ ವಿಶ್ವ ಕಂಡ ಮಹಾಯೋಗಿಣಿ. ಅವರ 114 ವಚನಗಳನ್ನು ಓದಿದರೆ ಜ್ಞಾನದ ನಕ್ಷತ್ರ ಕಾಣುತ್ತದೆ ಎಂದು ನುಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸುರೇಖಾ ಉದ್ಘಾಟಿಸಿ ಮಾತನಾಡಿ, ಹಡಪದ ಅಪ್ಪಣ್ಣನವರು ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಶರಣ. ಬಸವಣ್ಣನವರ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಅನುಭವ ಮಂಟಪವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಮಾದರಿಯಾಗಿದ್ದರು ಎಂದರು.
ಧ್ವಜಾರೋಹಣ ನೆರವೇರಿಸಿದ ಸಂಚಾರ ನಿಯಂತ್ರಕ ಬಸವರಾಜ ಕರಹರಿ ಮಾತನಾಡಿ, ಹಡಪದ ಅಪ್ಪಣ್ಣನವರು ನಿಷ್ಠೆ, ಕಾಯಕ ತತ್ವ, ದಾಸೋಹ, ಅರಿವು ವೈರಾಗ್ಯದಲ್ಲಿ ಪರಾಕಾಷ್ಠೆ ಹೊಂದಿದ್ದರು ಎಂಬುದು ಅವರ ವಚನಗಳಿಂದ ದೃಢಪಡುತ್ತದೆ. ಆತ್ಮಶುದ್ಧಿ, ನಿರ್ಮಲ ಭಕ್ತಿ, ನಡೆ-ನುಡಿಯಲ್ಲಿ ಶುದ್ಧತೆಯನ್ನು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.
ವಿಶ್ವನಾಥ ಕಾಜಿ ಅಧ್ಯಕ್ಷತೆ ವಹಿಸಿದ್ದರು. ಹಡಪದ ಅಪ್ಪಣ್ಣ ಸಮಾಜ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶರಣಪ್ಪ ಚಂದನಹಳ್ಳಿ, ತೆಲಂಗಾಣ ರಾಷ್ಟ್ರೀಯ ಬಸವದಳ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ್, ಸೋನಾಲಿ ನೀಲಕಂಠೆ, ರವೀಂದ್ರ ಶಿವಪೂಜೆ ಮಾತನಾಡಿದರು.
ಹಡಪದ ಅಪ್ಪಣ್ಣ ನೌಕರರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಡಿಗ್ಗಿ ವಚನ ಪಠಣ ಮಾಡಿದರು. ಕಲಾವಿದ ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ಮೀರಾ ಖೇಣಿ ಸ್ವಾಗತಿಸಿದರು. ಜ್ಞಾನದೇವಿ ಬಬಛಡೆ ನಿರೂಪಣೆ ಮಾಡಿದರು.