ಜಿಲ್ಲೆ

ಸಮಗ್ರ ಅಭಿವೃದ್ಧಿ-ಸರ್ವರ ಅಭ್ಯುದಯ ವಿಜನ್ ಬಜೆಟ್

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಕೇಂದ್ರದ ಬಜೆಟ್ ಸರ್ವಾಂಗೀಣ ಅಭಿವೃದ್ಧಿ, ಸರ್ವರ ಅಭ್ಯುದಯದ ವಿಜನ್ ಹೊಂದಿರುವ ಐತಿಹಾಸಿಕ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಮೊದಲ ಬಜೆಟ್ 2047ರಲ್ಲಿ ವಿಕಸಿತ ಭಾರತ ನಿರ್ಮಾಣದ ಕನಸನ್ನು ನನಸುಗೊಳಿಸುವುದಕ್ಕೆ ಮುನ್ನುಡಿ ಬರೆಯುವ ಬಜೆಟ್ ಎನಿಸಿದೆ. ಈ ಬಜೆಟ್‌ನಲ್ಲಿರುವ ಎಲ್ಲಾ ಅಂಶಗಳು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ನವಮನ್ವಂತರ ಆರಂಭಿಸುವ ದೂರದೃಷ್ಟಿತ್ವ(ವಿಜನ್) ಹೊಂದಿವೆ. "ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಜೊತೆಗೆ ಸಬ್‌ಕಾ ವಿಶ್ವಾಸ್" ಗಳಿಸುವ ಜನಸಾಮಾನ್ಯರ ಪರವಾದ ಜನಪ್ರೀಯ ಬಜೆಟ್ ಇದಾಗಿದೆ ಎಂದು ಇಲ್ಲಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ವಿಶ್ಲೇಷಿಸಿದ್ದಾರೆ.

ರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗದ ವಿಕಾಸ, ಕೃಷಿಗೆ ಉತ್ತೇಜನ, ಸೂರಿಲ್ಲದವರಿಗಾಗಿ 3 ಕೋಟಿ ಮನೆಗಳ ನಿರ್ಮಾಣ, ಮುದ್ರಾ ಯೋಜನೆ ಸಾಲ 20 ಲಕ್ಷಕ್ಕೆ ಹೆಚ್ಚಳ, ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಕ್ರಮ, ಭಾರತಕ್ಕೆ ಜಾಗತಿಕ ಪ್ರವಾಸಿ ಹಬ್ ಮಾಡಲು ಸಂಕಲ್ಪ, ಆದಾಯ ತೆರಿಗೆ ಪಾವತಿದಾರರಿಗೆ ಮತ್ತಷ್ಟು ಅನುಕೂಲ, ಮಹಿಳೆಯರ ಕಲ್ಯಾಣಕ್ಕೆ ಅತೀ ಹೆಚ್ಚು 3 ಲಕ್ಷ ಕೋಟಿ ರೂ. ಅನುದಾನ ಮೀಸಲು, ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಒತ್ತು, ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಆಕರ್ಷಿಸಿ ಬೃಹತ್ ಕೈಗಾರಿಕೆ ಸ್ಥಾಪಿಸಿ ದುಡಿವ ಕೈಗಳಿಗೆ ಕೆಲಸ ನೀಡಲು ಕ್ರಮ, ಬಡವರು, ಶ್ರಮಿಕರು, ದಲಿತರು, ಹಿಂದುಳಿದವರು, ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಸೇರಿದಂತೆ ಸರ್ವರ ಹಿತ, ಕಾಳಜಿಯುಳ್ಳ ಅನೇಕ ಅಂಶಗಳು ಬಜೆಟ್‌ನಲ್ಲಿ ಸೇರಿವೆ. ಎನ್‌ಡಿಎ ಸರ್ಕಾರದ 3.0 ಆಡಳಿತದ ಚೊಚ್ಚಲ ಬಜೆಟ್ ಮುಂದಿನ ಐದು ವರ್ಷದ ಕಾರ್ಯಯೋಜನೆಗೆ ಚಾಲನೆ ಕೊಟ್ಟಿದೆ ಎಂದು ವಿವರಿಸಿದ್ದಾರೆ.