ಭಾಲ್ಕಿ: ಮನುಷ್ಯನ ಬದುಕು ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರ ಆಗಬೇಕು ಎಂದು ಹಿರೇಮಠ ಸಂಸ್ಥಾನದ ಹಿರಿಯ ಪೂಜ್ಯರು, ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಣಿಯಂತೆ ಬಾಲ್ಯ, ಯೌವ್ವನ, ಮುಪ್ಪು ಈ ಮೂರು ಹಂತಗಳನ್ನು ದಾಟಲು ಗುರುವಿನ ಮಾರ್ಗದರ್ಶನ ಬೇಕೇಬೇಕು ಎಂದರು.
ಜೀವನದಲ್ಲಿ ಯಶಸ್ಸು ಸಾಧಿಸಲು ಗುರು ಮತ್ತು ಗುರಿ ಬೇಕು. ಯಾವ ರೀತಿ ಮಡಿಕೆ ಮಾಡಲು ಮಣ್ಣು, ಆಭರಣಕ್ಕೆ ಹೊನ್ನಿನ ಅಗತ್ಯವಿದೆಯೋ ಅದೇ ರೀತಿ ಬದುಕಿನಲ್ಲಿ ಯಶಸ್ಸಿನ ಶಿಖರವೇರಲು ಸಮರ್ಥ ಗುರುವಿನ ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದರು.
ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸುವುದೇ ಗುರುಪೂರ್ಣಿಮೆ ಮಹತ್ವ. ಪ್ರತಿಯೊಬ್ಬರೂ ಹೃದಯವಂತಿಕೆ ಬೆಳೆಸಿಕೊಂಡು ಅಧ್ಯಾತ್ಮ ದಾರಿಯಲ್ಲಿ ನಡೆದಾಗಲೇ ಸದ್ಗತಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಆಧುನಿಕ ದಿನಗಳಲ್ಲಿ ಅಜ್ಞಾನದ ಮಡುವಿನಲ್ಲಿ ಬಿದ್ದು, ಸಂಕುಚಿತ ಮನೋಭಾವನೆ ರೂಢಿಸಿಕೊಂಡಿರುವ ಮನುಷ್ಯ ಜಾಗೃತನಾಗಿ ಧರ್ಮದ ಹಾದಿಯಲ್ಲಿ ನಡೆಯಬೇಕಾದರೆ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯ, ಮಹಾರಾಷ್ಟ್ರ, ತೆಲಂಗಾಣದಿಂದ ಸಹಸ್ರಾರು ಭಕ್ತರು ಆಗಮಿಸಿ ಪೂಜ್ಯರ ದರ್ಶನ ಪಡೆದರು.