ಜಿಲ್ಲೆ

ದೇವರ ಕೃಪೆ ಇಲ್ಲದೆ ಸುಖ ಸಿಗಲ್ಲ

ರೇವಣಸಿದ್ದಪ್ಪ ಪಾಟೀಲ್

ಬೀದರ್: ದೇವರು ಹಾಗೂ ಸದ್ಗುರುವಿನ ಕೃಪೆ ಇಲ್ಲದೆ ಜೀವನದಲ್ಲಿ ನಿಜವಾದ ಸುಖ, ಭೋಗಗಳು ಸಿಗುವುದಿಲ್ಲ ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಗುರು ವಂದನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹರ ಪೂಜೆ, ಗುರು ಸೇವೆ, ವರ ಪುಣ್ಯ ಇಲ್ಲದೆ ಸುಖ, ಭೋಗಗಳು ಸಿಗುವುದುಂಟೆ ಎಂದು ಶರಣರು ಹೇಳಿದ್ದಾರೆಂದು ತಿಳಿಸಿದರು.
12 ಹುಣ್ಣಿಮೆಗಳಲ್ಲೇ ಗುರು ಪೂರ್ಣಿಮೆ ಶ್ರೇಷ್ಠವಾದದ್ದು. ಹೀಗಾಗಿ ಗುರು ಪೂರ್ಣಿಮೆ ದಿನ ಗುರುವಿನ ದರ್ಶನ, ಜ್ಞಾನ ಪಡೆದುಕೊಳ್ಳುವುದು ಬಹು ದೊಡ್ಡ ಸೌಭಾಗ್ಯ ಎಂದು ಹೇಳಿದರು.
ಗುರು ಭಕ್ತನ ಅಂಧಕಾರವನ್ನು ದೂರ ಮಾಡುತ್ತಾನೆ. ಸುಜ್ಞಾನವನ್ನು ತೋರುತ್ತಾನೆ. ಕಾರಣ, ಗುರುವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತಿಳಿಸಿದರು.
ಮಾನವನ ಜನ್ಮ-ಮೃತ್ಯು ಭಗವಂತನ ಕೈಯಲ್ಲಿ ಇದೆ. ಆದರೆ, ಇದ್ದಷ್ಟು ದಿನ ಅರ್ಥಪೂರ್ಣವಾಗಿ ಬದುಕುವುದು ಮಾನವನ ಕೈಯಲ್ಲಿ ಇದೆ. ಹರ ಹಾಗೂ ಗುರುವನ್ನು ನಿಂದಿಸಿದವನಿಗೆ ನರಕ ತಪ್ಪದು ಎಂದು ಹೇಳಿದರು.
ಇದಕ್ಕೂ ಮುನ್ನ 101 ಸುಮಂಗಲೆಯರಿಂದ ರಾಚೋಟೇಶ್ವರ ಕರ್ತೃ ಗದ್ದುಗೆಗೆ ಕುಂಭಾಭಿಷೇಕ ನೆರವೇರಿತು. ಭಕ್ತರು ಗುರುವಿನ ಪಾದ ಪೂಜೆ ಮಾಡಿ ಭಕ್ತಿ ಸಮರ್ಪಿಸಿದರು. ಭಾಲ್ಕಿಯ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ ಪ್ರಸಾದ ದಾಸೋಹಗೈದರು.