ಜಿಲ್ಲೆ

ಸಚಿವ ತಿಮ್ಮಾಪುರ ಅಭಿನಂದನಾ ಸಮಾರಂಭ 20ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಾದಿಗ ಸಮನ್ವಯ ಸಮಿತಿಯಿಂದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಅಭಿನಂದನಾ ಸಮಾರಂಭ ಜು.20ರಂದು ಬೆಳಗ್ಗೆ 11.30ಕ್ಕೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಚಿವ ತಿಮ್ಮಾಪುರ ಮಾದಿಗ ಸಮಾಜದ ಏಳಿಗೆಗಾಗಿ ಹಗಲಿರುಳು ಹೋರಾಟ ಮಾಡುತ್ತಿರುವುದರಿಂದ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ರಾಜಕುಮಾರ ಕಡ್ಯಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವರಾದ ನಂತರ ಪ್ರಥಮ ಬಾರಿಗೆ ತಿಮ್ಮಾಪುರ ಗಡಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜದ ಹಿತಚಿಂತಕರು, ಹಿತೈಷಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ ಮಾತನಾಡಿ, ಸಚಿವ ತಿಮ್ಮಾಪುರ ಅವರನ್ನು ಭವ್ಯ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ಕರೆತರಲಾಗುವುದು ಎಂದರು.
ಹಿರಿಯ ಮುಖಂಡರಾದ ಶಿವರಾಜ ಬಂಬುಳಗಿ, ಅಭಿ ಕಾಳೆ, ಸಂಜೀವಕುಮಾರ ಬೇಂದ್ರೆ ಮಾತನಾಡಿದರು. ಪ್ರಮುಖರಾದ ಪ್ರಸಾದ ಮನ್ನಳ್ಳಿ, ವಿಜಯಕುಮಾರ ಹಿಪ್ಪಳಗಾಂವ, ಜಾಫಟ್ ಕಡ್ಯಾಳ, ಕಮಲಾಕರ ಎಲ್.ಹೆಗಡೆ, ಸುಭಾಷ ವರ್ಮಾ, ಜೈಶೀಲ ಮೇತ್ರೆ, ಜೈಶೀಲ ಕಲ್ಲವಾಡಿ, ಪರಮೇಶ್ವರ ಕಾಳಮದರಗಿ ಇತರರಿದ್ದರು.