ಜಿಲ್ಲೆ

ಇಲಾಖೆಗಳಲ್ಲಿ ಹೆಚ್ಚೆಚ್ಚು ಕನ್ನಡ ಬಳಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಅಲ್ಲದೆ ಅದನ್ನು ಕರುಳಿನ ಭಾಷೆಯಾಗಿ ಭಾವಿಸಿದಾಗಲೇ ಕನ್ನಡ ಉಳಿಯಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ದೇಶದಲ್ಲಿ ಶೇ.66 ಹಿಂದಿ ಭಾಷೆ ವೇಗದಲ್ಲಿ ಬೆಳೆಯುತ್ತಿದ್ದರೆ, ಬಂಗಾಳಿ ಶೇ.27, ತಮಿಳು, ತೆಲುಗು, ಮರಾಠಿ ಹಾಗೂ ಓಡಿಯಾ ಭಾಷೆಗಳು ಕ್ರಮವಾಗಿ ಶೇ.12, 13, 14, 15ರಷ್ಟು ಬೆಳೆಯುತ್ತಿದೆ. ಆದರೆ ನಮ್ಮ ಕನ್ನಡ ಶೇ.3.73 ಮಾತ್ರ ಬೆಳವಣಿಗೆ ಆಗುತ್ತಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಹೇಳುತ್ತವೆ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಇದು ಕೇವಲ ಆಡು ಭಾಷೆಯಾಗಿ ಉಳಿಯುವ ಕಾಲ ಬಹಳ ದೂರವಿಲ್ಲ ಎಂದರು.
ಕನ್ನಡಿಗರು ಬೇರೆ-ಬೇರೆ ವಿಷಯ ಕುರಿತು ಮಾತನಾಡುತ್ತಾರೆ. ಆದರೆ ಕನ್ನಡೀಕರಣಕ್ಕಾಗಿ ಏಕೆ ಮಾತನಾಡಲ್ಲ? 27 ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು ಹಲವಾರು ಜನರು ಹೋರಾಡಿದ್ದಾರೆ. ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿ ಹಲವಾರು ಸಂಘಟನೆಗಳ ಕೊಡುಗೆ ಅಪಾರ ಎಂದು ಹೇಳಿದರು.
ಭಾರತದ ಅತ್ಯಂತ ಪ್ರಭಾವಶಾಲಿ ಭಾಷೆಗಳಲ್ಲಿ ಕನ್ನಡವೂ ಒಂದು. ನಮ್ಮ ಪರಂಪರೆ ಕಲಿಯಬೇಕು. ಮಾತೃಭಾಷೆ ಅಸ್ಮಿತೆ ಉಳಿಸಲು ನಾವೆಲ್ಲರೂ ಸಂಕಲ್ಪದೊಂದಿಗೆ ಪ್ರಯತ್ನಿಸಬೇಕು. ಇಲ್ಲವಾದರೆ ನಮ್ಮನ್ನು ನಾವೇ ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಯೊಬ್ಬ ಶಾಸಕರಿಗೆ ಐದು ಶಾಲೆ ದತ್ತು ನೀಡಿ ಅವರ ಅನುದಾನದಲ್ಲಿ ಅಭಿವೃದ್ಧಿ ಮಾಡುವುದು ಹಾಗೂ ಮದರಸಾಗಳಲ್ಲಿ ವಾರಕ್ಕೆ ಎರಡು ಗಂಟೆ ಕನ್ನಡ ಕಲಿಸುವುದು ಕಡ್ಡಾಯಗೊಳಿಸುವ ಯೋಜನೆ ರೂಪಿಸಲಾಗಿದ್ದು, ಬೆಂಗಳೂರಿನ ಕಲಾಸಿಪಾಳ್ಯ, ವಿಜಯಪುರ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪ್ರಾಧಿಕಾರದಿಂದ ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವುದಾಗಿ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸಂತೋಷ ಹಾನಗಲ್ ಮಾತನಾಡಿ, ಗಡಿ ಜಿಲ್ಲೆ ಬೀದರ್ ನಲ್ಲಿ ಐದು ಭಾಷೆಗಳ ಸಂಗಮ ಇದ್ದರೂ ಮಾತೃಭಾಷೆ ಕನ್ನಡ ಗಟ್ಟಿಯಾಗಿದೆ. ಕನ್ನಡ ಅನುಷ್ಠಾನ ಕಾಗದ ಪತ್ರಗಳ ಚಲಾವಣೆ ಮಾಹಿತಿ ಕೇವಲ 16 ಇಲಾಖೆಗಳು ನೀಡಿವೆ ಎಂದರು.
ಅಂಗಡಿಗಳ ನಾಮಫಲಕ ಶೇ.60 ಕನ್ನಡದಲ್ಲಿ ಇರಬೇಕು. ಈ ಕುರಿತು ವ್ಯಾಪಾರಿಗಳ ಸಭೆ ಕರೆದು ನಿರ್ದೇಶನ ನೀಡಬೇಕು. ಲೋಕೋಪಯೋಗಿ ಇಲಾಖೆ ಟೆಂಡರ್ ಗಳನ್ನು ಕನ್ನಡದಲ್ಲಿ ಕೊಡಬೇಕು. ಖಜಾನೆ ಇಲಾಖೆ ಅಧಿಕಾರಿಗಳು ಕನ್ನಡದಲ್ಲಿ ಬಿಲ್ ಮಾಡಬೇಕು.
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಕನ್ನಡ ಉಳಿಸಿ ಬೆಳೆಸಬೇಕಾದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ವ್ಯವಹಾರ ಕನ್ನಡದಲ್ಲಿ ನಡೆಯುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ನಗರಸಭೆ ಕಸದ ವಾಹನಗಳಲ್ಲಿ ಹಿಂದಿ ಹಾಡುಗಳನ್ನು ಹಾಕಲಾಗುತ್ತಿದ್ದು, ಕನ್ನಡದಲ್ಲೇ ಹಾಕುವಂತೆ ನೋಡಿಕೊಳ್ಳಬೇಕು. ಕೆಲ ಹಳ್ಳಿಗಳ ನಾಮಫಲಕ ಕನ್ನಡದಲ್ಲಿ ತಪ್ಪಾಗಿ ಬರೆದಿದ್ದು, ತಕ್ಷಣ ಸರಿಪಡಿಸಬೇಕು. ಗಡಿ ಭಾಗದ ಕನ್ನಡ ಶಾಲೆಗಳಲ್ಲಿರುವ ಶೇ.50 ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಸೋನಾರೆ, ಡಿಡಿಪಿಐ ಸಲೀಂ ಪಾಶಾ, ಡಿಡಿಪಿಯು ಚಂದ್ರಕಾಂತ ಶಾಬಾದಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ, ಶಿವಶಂಕರ ಟೋಕರೆ ಇತರರಿದ್ದರು.