ಬೀದರ್: ಈ ಭಾಗದಲ್ಲಿ ಮಾತೃ ಭಾಷೆ ಕನ್ನಡ ಬೆಳೆಸುವಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕೊಡುಗೆ ಅಪಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಪ್ರೊ.ಜಗನ್ನಾಥ ಹೆಬ್ಬಾಳೆ ಅಭಿನಂದನ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಹೆಬ್ಬಾಳೆಯವರ ಅಭಿನಂದನ ಸಂಪುಟ ಧರಿಯ ಸಿರಿ ಬಿಡುಗಡೆಗೊಳಿಸಿ ಮಾತನಾಡಿ, ನಿಜಾಮನ ಕಾಲದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಹೊರಗೆ ಉರ್ದು ನಾಮಫಲಕ ಹಾಗಿ ಒಳಗೆ ಕನ್ನಡ ಕಲಿಸುತ್ತಿದ್ದರು. ಭಾಲ್ಕಿ ಮಠ ನನಗೆ ಪ್ರೇರಣೆ. ಅದಕ್ಕಾಗಿಯೇ ಇಲ್ಲಿಂದ ಪ್ರವಾಸ ಆರಂಭಿಸಿದ್ದೇನೆ ಎಂದು ತಿಳಿಸಿದರು.
ವಿದ್ಯಾವಂತರು, ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಕನ್ನಡ ಭಾಷೆ ಏಕೆ ಬೆಳೆಯುತ್ತಿಲ್ಲ ಎನ್ನುವ ಬಗ್ಗೆ ವಿಚಾರ ಮಾಡಬೇಕಾಗಿದೆ. ಕನ್ನಡ ಭಾಷೆ ಬೆಳೆಸುವ ಹೊಣೆಗಾರಿಕೆ ಬಹುಮುಖಿ ಆಗಬೇಕು. ಹೀಗಾದಾಗ ಮಾತೃ ಭಾಷೆ ಬೆಳೆಯಲು ಸಾಧ್ಯ ಎಂದರು.
ಜಗನ್ನಾಥ ಹೆಬ್ಬಾಳೆ ಅವರನ್ನು ಹಲವು ವರ್ಷಗಳಿಂದ ನೋಡುತ್ತೇನೆ. ಕನ್ನಡಕ್ಕಾಗಿ ಸುಮಾರು 45 ವರ್ಷಗಳ ಕಾಲ ಕೆಲಸ ಮಾಡಿದ ಅವರನ್ನು ಗೌರವಿಸಬೇಕಾದುದು ಎಲ್ಲರ ಕರ್ತವ್ಯ. ಕನ್ನಡ ಭಾಷೆ ಹೇಗೆ ಕಟ್ಟಬೇಕೆಂದು ಅವರು ತೋರಿಸಿದ್ದಾರೆ. ಕನ್ನಡದ ಪ್ರಸಾರಕ್ಕಾಗಿ ಕರ್ನಾಟಕ ಸಂಘವನ್ನು ಕಟ್ಟಿದ್ದಾರೆ. ಅನೇಕ ಕಥೆ, ಕಾವ್ಯಗಳನ್ನು ಬರೆದಿದ್ದಾರೆ ಎಂದು ಹೇಳಿದರು.
ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಿ ಮಾತನಾಡಿ, ಹಿರಿಯರು ಮಾಡಿರುವ ಜನಪರ ಕೆಲಸವನ್ನು ಯುವ ಸಮೂಹ ಕಲಿಯಬೇಕು. ಅದರಿಂದ ನಮಗೆ ಮಾರ್ಗದರ್ಶನ ಸಿಗುತ್ತದೆ. ಹೋರಾಟ, ಸಂಘಟನೆ, ವಿವಿಧ ಕ್ಷೇತ್ರಗಳಿಗೆ ಕೊಟ್ಟಿರುವ ಕೊಡುಗೆಗಳನ್ನು ಅಧ್ಯಯನ ಮಾಡಿ ಪ್ರೇರಣೆ ಪಡೆದರೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್ ಪ್ರೊ.ವಿಕ್ರಮ ವಿಸಾಜಿ ಕೃತಿ ಕುರಿತು ಮಾತನಾಡಿದರು. ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್, ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿದರು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶ ಸಂತೋಷ ಹಾನಗಲ್, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಭಿನಂದನ ಸಂಪುಟದ ಪ್ರಧಾನ ಸಂಪಾದಕ ಕಲ್ಯಾಣರಾವ ಪಾಟೀಲ್, ಶಂಭುಲಿಂಗ ಕಾಮಣ್ಣ, ಸಾವಿತ್ರಿ ಹೆಬ್ಬಾಳೆ, ಚಂದ್ರಶೇಖರ ಹೆಬ್ಬಾಳೆ, ಅಭಿನಂದನ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಜುಮ್ಮಾ, ಮಹಾದೇವಿ ಹೆಬ್ಬಾಳೆ, ರಾಜಕುಮಾರ ಹೆಬ್ಬಾಳೆ, ಮಹಾರುದ್ರ ಡಾಕುಳಗಿ ಇತರರಿದ್ದರು.