ಬೀದರ್: ಮನ್ನಳ್ಳಿ ಠಾಣೆ ವ್ಯಾಪ್ತಿಯ ಭಂಗೂರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ 305 ಕೆಜಿ ಗಾಂಜಾ ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ.
ಹೈದರಾಬಾದ್ ನಿಂದ ಮುಂಬೈ ಕಡೆಗೆ ಲಾರಿ ಮತ್ತು ಕಾರಿನಲ್ಲಿ ಅನಧಿಕೃತವಾಗಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಖಾಕಿ ಪಡೆ ದಾಳಿ ನಡೆಸಿದೆ. ಬಂಧಿತರಿಂದ 3.05 ಕೋಟಿ ಮೌಲ್ಯದ 305 ಕೆಜಿ ಗಾಂಜಾ, ಒಂದು ಲಾರಿ, ಕಾರು, ನಾಲ್ಕು ಮೊಬೈಲ್, 9,230 ನಗದು ಸೇರಿ 3,19,74,730 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಓಡಿಶಾದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮನ್ನಾಎಖೇಳ್ಳಿ ಠಾಣೆಯಲ್ಲಿ ದಾಖಲಾದ ಮಲ್ಲಿಕಾರ್ಜುನರಾವ (ಮಧು ಬಿಲ್ಡರ್) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಆರು ಜನರಲ್ಲಿ ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಿ ಕೃತ್ಯಕ್ಕೆ ಬಳಸಿದ ಒಂದು ಚಾಕು, ಕಾರು, ನಗದು 56 ಸಾವಿರ ರೂ. ಹಾಗೂ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಉಳಿದ ಮೂವರ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ್, ಜೆ.ಎಸ್. ನ್ಯಾಮೇಗೌಡ, ಸಿಪಿಐಗಳಾದ ಹನುಮರಡ್ಡಪ್ಪ, ಪಾಲಾಕ್ಷಯ್ಯ ಹಿರೇಮಠ ಇತರರಿದ್ದರು.
ಬೀದರ್ ಮಾರ್ಕೆಟ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಸಂಬಂಧ 11.97 ಗ್ರಾಂ ಚಿನ್ನಾಭರಣ ಹಾಗೂ 15.35 ಗ್ರಾಂ ಬೆಳ್ಳಿ ಆಭರಣವನ್ನು ಎಸ್ಪಿ ಅವರು ವಾರಸುದಾರರಿಗೆ ನೀಡಿದರು.