ಬೀದರ್: ಅಪರೂಪದ ಮೌಲ್ಯಗಳಿರುವ ವಚನ ಸಾಹಿತ್ಯ ಸಂಪತ್ತನ್ನು ಜಗತ್ತಿಗೆ ಪರಿಚಯಿಸಿದ್ದೇ ಡಾ.ಫ.ಗು. ಹಳಕಟ್ಟಿ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ 165ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಡಾ.ಫ.ಗು. ಹಳಕಟ್ಟಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹ, ಸಂಶೋಧನೆ, ಮುದ್ರಣ ಮಾಡದಿದ್ದಲ್ಲಿ ವಿಶ್ವಕ್ಕೆ ಈ ಅಮೂಲ್ಯ ಸಂಪತ್ತು ಪರಿಚಯವೇ ಆಗುತ್ತಿರಲಿಲ್ಲ ಎಂದರು.
ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿದ್ದರಿಂದ ಪ್ರಸ್ತುತ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ವಚನ ಸಾಹಿತ್ಯ ಇರುವವರೆಗೆ ಹಳಕಟ್ಟಿ ಹೆಸರು ಇರುತ್ತದೆ ಎಂದು ಹೇಳಿದರು.
ವ್ಯಕ್ತಿಯು ಪಂಚಾಂಗ, ಜ್ಯೋತಿಷ್ಯ ಶಾಸ್ತ್ರ, ಕಂದಾಚಾರವನ್ನು ನಂಬದೆ ಮಾನಸಿಕ ಮತ್ತು ಆತ್ಮ ಬಲದಿಂದ ಬದುಕು ಸಾಗಿಸಬೇಕು. ನಕರಾತ್ಮಕ ಭಾವನೆಗಳನ್ನು ದೂರವಿಟ್ಟು ಸಕಾರಾತ್ಮಕ ಚಿಂತನೆಯಿಂದ ಅಂತರಂಗ ಬಹಿರಂಗ ಶುದ್ಧೀಕರಣ ಆಗಬೇಕಾದರೆ ವಚನ ಚಿಂತನೆ ಮಾಡುವ ಅಗತ್ಯವಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಶರಣರ ಸತ್ಸಂಗ ಮತ್ತು ವಚನಗಳ ಅಧ್ಯಯನ ದಿವ್ಯ ಔಷಧ ಎಂದರು.
ಡಾ.ದೇವಿಕಾ ನಾಗೂರೆ ಉಪನ್ಯಾಸ ನೀಡಿ, ವಕೀಲರಾಗಿದ್ದ ಹಳಕಟ್ಟಿ ಅವರು ಸ್ನೇಹಿತರೊಬ್ಬರ ಮನೆಯಲ್ಲಿ ತಾಡೋಲೆಗಳ ಕಟ್ಟು ನೋಡಿದ ನಂತರ ವಚನ ಸಾಹಿತ್ಯದ ಹಸ್ತಪ್ರತಿಗಳ ಸಂಗ್ರಹಕ್ಕೆ ಮುಂದಾದರು. ಸ್ವಂತ ಮುದ್ರಾಣಾಲಯದಲ್ಲಿ ಶಿವಾನುಭವ, ನವಕರ್ನಾಟಕ ನಿಯತಕಾಲಿಕೆಗಳ ಮೂಲಕ ವಚನಗಳು ಜನರ ಗಮನ ಸೆಳೆಯುವಂತೆ ಮಾಡಿದರು ಎಂದು ಸ್ಮರಿಸಿದರು.
ಸ್ತ್ರೀರೋಗ ತಜ್ಞೆ ಡಾ.ವಿಜಯಶ್ರೀ ಬಶೆಟ್ಟಿ ಉದ್ಛಾಟಿಸಿ ಮಾತನಾಡಿ, ಸಮಾಜಕ್ಕೆ ವಚನ ಸಾಹಿತ್ಯ ಪರಿಚಯಿಸಲು ಹಳಕಟ್ಟಿ ಕೊಡುಗೆ ಅಪಾರ. ಎಲ್ಲ ಶರಣರ ವಚನಗಳ ಹಸ್ತಪ್ರತಿಗಳನ್ನು ಶೋಧಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಈ ಕಾರ್ಯಕ್ಕಾಗಿ ಅವರು ಅನೇಕ ಕಷ್ಟ-ನೋವುಗಳನ್ನು ಅನುಭವಿಸಿದ್ದರು. ಸ್ವಂತ ಜೀವನ ಬಡತನದಲ್ಲಿ ಕಳೆದು ವಚನ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ ವಚನ ಪಿತಾಮಹ ಎಂದು ಹೇಳಿದರು.
ಶ್ರೀ ನಿರಂಜನ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ, ಪ್ರಸಾದ ನಿಲಯ ಕಾರ್ಯದರ್ಶಿ ಪ್ರೊ.ಎಸ್.ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಉಮಾಕಾಂತ ಮೀಸೆ, ಸಂಗ್ರಾಮ ಎಂಗಳೆ, ಗುರುನಾಥ ಬಿರಾದಾರ್, ಭಾರತಿ ಪಾಟೀಲ್, ಮೀನಾಕ್ಷಿ ಪಾಟೀಲ್, ಲಕ್ಷ್ಮೀಬಾಯಿ ಮಾಳಗೆ, ವಿದ್ಯಾಸಾಗರ ಪಾಟೀಲ್, ಶಕುಂತಲಾ ಮೀಸೆ, ಸುರೇಖಾ ಪಾಟೀಲ್, ತೀರ್ಥಮ್ಮ, ಕಸ್ತೂರಬಾಯಿ ಬಿರಾದಾರ್, ಡಾ.ವೈಜಿನಾಥ ಬಿರಾದಾರ್, ಮಹಾದೇವಿ ಬಿರಾದಾರ್, ಸುನೀತಾ, ಶ್ರೀಕಾಂತ ಬಿರಾದಾರ್ ಇತರರಿದ್ದರು. ರೂಪಾಲಿ ಸ್ವಾಗತಿಸಿದರು. ಅರ್ಪಿತಾ ನಿರೂಪಣೆ ಮಾಡಿದರು. ರೇಣುಕಾ ವಂದಿಸಿದರು.
ಆರತಿ ಸಂದೀಪ ಏಖೇಳ್ಳಿ ಬಸವ ಪೂಜೆ ನೆರವೇರಿಸಿದರು. ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪುರಸ್ಕೃತರಾದ ಮಹೇಶ ಮಜಗೆ, ಉದಯ ಜೀರ್ಗೆ ಅವರನ್ನು ಸನ್ಮಾನಿಸಲಾಯಿತು.