ಭಾಲ್ಕಿ: ಶೈಕ್ಷಣಿಕ ಜೀವನದಲ್ಲಿ ಸಮಯ ಬಹು ಅಮೂಲ್ಯವಾಗಿದ್ದು, ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಕಿವಿಮಾತು ಹೇಳಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ. ಪ್ರತಿ ನಿಮಿಷವೂ ಬಹಳ ಮುಖ್ಯ. ಹೀಗಾಗಿ ಸಮಯ ವ್ಯರ್ಥ ಮಾಡಬೇಡಿ ಎಂದರು.
ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕರು ಗ್ರಾಮೀಣ ಭಾಗದವರು. ಹಳ್ಳಿ ಮಕ್ಕಳು ನಗರ, ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡಬೇಕಿದ್ದರಿಂದ ಶೈಕ್ಷಣಿಕ ವರ್ಷದ ಆರಂಭದಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಸಾಧನೆ ಮಾಡಬೇಕು ಎಂದು ಹಿತೋಪದೇಶ ನೀಡಿದರು.
ವಿದ್ಯಾರ್ಥಿಗಳು ಪಾಠಗಳನ್ನು ಪರಿಪೂರ್ಣ ಓದಬೇಕು. ತಿಳಿಯದಿದ್ದಲ್ಲಿ ಧೈರ್ಯದಿಂದ ಪ್ರಶ್ನೆ ಕೇಳಿ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು. ಪ್ರಶ್ನೆಗಳನ್ನು ಕೇಳುವುದು ಉತ್ತಮ ವಿದ್ಯಾರ್ಥಿಯ ಲಕ್ಷಣ. ಏಕಾಗ್ರತೆ ಓದಿಗಾಗಿ ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಪಾಲಕರು ಸಹ ಮಕ್ಕಳ ಭವಿಷ್ಯಕ್ಕಾಗಿ ಮನೆಯಲ್ಲಿ ಟಿವಿ, ಮೊಬೈಲ್ ಬಳಕೆ ಕಮ್ಮಿ ಮಾಡಬೇಕು ಎಂದರು.
ತೆಲಂಗಾಣ ಲಿಂಗಾಯತ ಸಮಾಜದ ಅಧ್ಯಕ್ಷ ಬಸವರಾಜ ಚಪ್ಟೆ, ಮುಖ್ಯ ಶಿಕ್ಷಕ ಮಹೇಶ ಮಹಾರಾಜ, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ, ಸಂತೋಷ ಪತಂಗೆ, ರಾಜಕುಮಾರ ಮೋರಗೆ, ನಾಗನಾಥ ಬಿರಾದಾರ್, ಲಕ್ಷ್ಮಣ ಮೇತ್ರೆ, ಓಂಕಾರ ಹಾರಕೂಡೆ, ಪಂಢರಿನಾಥ ಪವಾರ್, ನಾಗಶೆಟ್ಟಿ ಬಿರಾದಾರ್, ನಂದಕುಮಾರ ಬಿರಾದಾರ್, ಸಂತೋಷ ಜೋಜನೆ, ಬಸವರಾಜ ಪ್ರಭಾ, ಹುಲೆಪ್ಪ ಕುಪ್ಪೆ, ದೈಹಿಕ ಶಿಕ್ಷಕ ಅನೀಲ ಇತರರಿದ್ದರು.
ಚಿನ್ನದ ಉಂಗುರ ಬಹುಮಾನ
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದ ಅಂಜಲಿ ನಾಗನಾಥ ಬಿರಾದಾರ್ ಗೆ ಮೂರು ಗ್ರಾಂ ಚಿನ್ನದ ಉಂಗುರ, ಕೊರಳಲ್ಲಿ ಧರಿಸುವ ಬೆಳ್ಳಿಯ ಚೌಕಾವನ್ನು ವೈಷ್ಣವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ್ ಅವರು ಬಹುಮಾನ ರೂಪದಲ್ಲಿ ನೀಡಿ ಪ್ರೋತ್ಸಾಹಿಸಿದರು.