ಬೀದರ್: ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಂಧನ ಖಂಡಿಸಿ ಹಾಗೂ ಮುಡಾ ಅಕ್ರಮದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಟೈರ್ ಸುಡಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾನಿರತರ ಮಧ್ಯೆ ಗದ್ದಲ ಶುರುವಾಯಿತು. ಕೊನೆಗೂ ಟೈರ್ ಸುಟ್ಟು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ತೆರಳುತ್ತಿದ್ದ ವಿಜಯೇಂದ್ರ ಅವರನ್ನು ಮಾರ್ಗಮಧ್ಯೆ ಪೊಲೀಸರು ಬಂಧಿಸಿದರೆ, ಮೈಸೂರಿನಲ್ಲಿ ಆರ್.ಅಶೋಕ್ ಮತ್ತು ಕಾರ್ಯಕರ್ತರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಮುಡಾ ಅಕ್ರಮದಿಂದ ಸಿಎಂ ಸಿದ್ದರಾಮಯ್ಯ ಮುಖವಾಡ ಕಳಚಿಬಿದ್ದಿದೆ ಎಂದು ದೂರಿದರು.
ಭ್ರಷ್ಟಾಚಾರಮುಕ್ತ, ಸಾಮಾಜಿಕ ನ್ಯಾಯಪರ ಆಡಳಿತ ನೀಡುತ್ತೇವೆ ಎಂದು ಅಕಾರಕ್ಕೆ ಬಂದ ವರ್ಷದೊಳಗೇ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ. ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೆ ಹಾಗೂ ಮುಡಾ ಕೇಸ್ ಸಿಬಿಐಗೆ ವಹಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಮುಖಂಡರು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಘಟಕ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ವಿಜಯಕುಮಾರ ಪಾಟೀಲ್ ಗಾದಗಿ, ಅಶೋಕ ಹೊಕ್ರಾಣೆ, ಬಾಬುರಾವ ಕಾರಬಾರಿ, ರಾಜೇಂದ್ರ ಪೂಜಾರಿ, ಬಸವರಾಜ ಪವಾರ್, ಮಹೇಶ್ವರ ಸ್ವಾಮಿ, ರಾಜು ಚಿದ್ರಿ, ಶ್ರೀನಿವಾಸ ಚೌದ್ರಿ, ಹಣಮಂತ ಬುಳ್ಳಾ, ನರೇಶ ಗೌಳಿ, ರಾಜಕುಮಾರ ಪಾಟೀಲ್, ವೀರು ದಿಗ್ವಾಲ್, ನಿತೀನ್ ಕರ್ಪೂರ್ ಇತರರಿದ್ದರು.