ಬೀದರ್: ದೇಶದ ಅಭಿವೃದ್ಧಿಗೆ ಜನಸಂಖ್ಯೆ ಹೆಚ್ಚಳ ಮಾರಕವಾಗಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಡಿಎಚ್ಒ ಕಚೇರಿಯಿಂದ ನಗರದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಉದ್ಘಾಟಿಸಿದ ಅವರು, ಜನಸಂಖ್ಯೆ ಹೆಚ್ಚಳದಿಂದ ಎಲ್ಲ ವಿಧದಲ್ಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೆ ಆರ್ಥಿಕ ಹೊರೆಯ ಜೀವನ ಶೈಲಿ ಹಾಗೂ ಬಡತನಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಜನದಟ್ಟಣೆಯಿಂದ ಆರ್ಥಿಕತೆ ಕುಸಿತಗೊಂಡು ಬೀದಿ-ಬೀದಿಗಳಲ್ಲಿ ಕೊಳಚೆ ಪ್ರದೇಶ ನಿರ್ಮಾಣವಾಗಲಿದೆ. ಇದರಿಂದ ಅನಾರೋಗ್ಯ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಿಸಿ ನೆಮ್ಮದಿ ಬದುಕು ಕಂಡುಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಜನಸಂಖ್ಯೆ ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಶಾಶ್ವತ ಪರಿಹಾರಕ್ಕಾಗಿ ಟೊಬೇಕ್ಟಮಿ, ಲೇಪ್ರಸ್ಕೋಪಿಕ್, ಎನ್ಎಸ್ವಿ ವಿಧಾನ ಹಾಗೂ ತಾತ್ಕಾಲಿಕ ವಿಧಾನಗಳಾದ ಐಯುಡಿ, ಚುಚ್ಚು ಮದ್ದು ಇತರ ಬಗ್ಗೆ ತಿಳಿಸಿ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದರು.
ಪ್ರಸಕ್ತ ವರ್ಷ ಜನಸಂಖ್ಯೆ ದಿನವನ್ನು ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಾದಂತೆ ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅಧಿಕವಾಗಿ ಮುಂದೊಂದು ದಿನ ಇವು ಸಹ ಬರಿದಾಗಲಿವೆ. ಇದಲ್ಲದೆ ಎಲ್ಲರಿಗೂ ಶಿಕ್ಷಣ ಕೊಡುವುದು, ಸೌಲಭ್ಯ ಕಲ್ಪಿಸುವುದು ಕಷ್ಟಕರವಾಗಲಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿ ಜೀವನ ಸಾಗಿಸುವುದು ಕಷ್ಟವಾಗಲಿದೆ. ಹೀಗಾಗಿ ಕುಟುಂಬ ಕಲ್ಯಾಣ ಪದ್ಧತಿ ಅಳವಡಿಸಿಕೊಳ್ಳಿ ಎಂದರು.
ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಶಿವಶಂಕರ ಬಿ., ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಕಿರಣ ಪಾಟೀಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬ್ಳೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೊಂಗ್ರೆ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಸಂತೋಷ ಕಾಳೆ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಗರಡ್ಡಿ, ಆರೋಗ್ಯ ನಿರೀಕ್ಷಣಾಧಿಕಾರಿ ರೂಜ್ವೆಲ್ಟ್, ಡಾ.ಲಕ್ಷ್ಮೀಕಾಂತ , ಶಾಲುಬಾಯಿ, ಅನೀತಾ, ಮುದಾಸ್ಸಿರ್, ಮಹೇಶರಡ್ಡಿ ಇತರರಿದ್ದರು.
ಜಾಗೃತಿ ಜಾಥಾ
ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು. ಡಿಎಚ್ಒ ಕಚೇರಿಯಿಂದ ಶುರುವಾದ ಜಾಥಾ ನಗರದ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ ಪುನಃ ಕಚೇರಿಗೆ ಆಗಮಿಸಿ ಕೊನೆಗೊಂಡಿತು. ಅಕಾರಿಗಳು ಹಾಗೂ ವಿದ್ಯಾರ್ಥಿಗಳು ಜನಸಂಖ್ಯೆ ನಿಯಂತ್ರಣದ ಘೋಷಣೆ ಮೊಳಗಿಸುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.