ಬಸವಕಲ್ಯಾಣ: ನಗರದಲ್ಲಿ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಉದ್ಯಾನವನಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಒತ್ತಾಯಿಸಿದೆ.
ಪಕ್ಷದ ನಿಯೋಗ ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ ಅವರಿಗೆ ಮನವಿಪತ್ರ ಸಲ್ಲಿಸಿ, ನಗರದ ವಿವಿಧೆಡೆ 222 ಉದ್ಯಾನವನ ಇದ್ದವು. ಆದರೀಗ ಬಹುತೇಕ ಕಡೆ ಒತ್ತುವರಿಯಾಗಿದ್ದು, ತನಿಖೆ ನಡೆಸಿ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದೆ.
ಈಗಾಗಲೆ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದ ಸಸ್ತಾಪುರ ಬಂಗ್ಲಾದಿಂದ ಕೋಟೆವರೆಗೆ ಕಾರ್ಯಾಚರಣೆ ನಡೆದಿದ್ದರೂ ಕೆಲ ಅಂಗಡಿಗಳ ಎದುರಿನ ಒತ್ತುವರಿ ತೆರವುಗೊಳಿಸಿಲ್ಲ. ಎಂಥ ದೊಡ್ಡ ವ್ಯಕ್ತಿ ಇದ್ದರೂ ಮುಲಾಜಿಲ್ಲದೆ ಖಾಲಿ ಮಾಡಿಸಿ. ತೆರವು ಕಾರ್ಯಾಚರಣೆಯಿಂದ ಸಣ್ಣ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದೆ. ಅಂಥವರನ್ನು ಗುರುತಿಸಿ ನಗರಸಭೆ ಮಳಿಗೆಗಳನ್ನು ಬಾಡಿಗೆಗೆ ನೀಡಬೇಕು ಎಂದು ಒತ್ತಾಯಿಸಿದೆ.
ಬಿಎಸ್ಪಿ ತಾಲೂಕು ಅಧ್ಯಕ್ಷ ಶಂಕರ ಫುಲೆ, ಸಂಯೋಜಕ ದತ್ತು ಸುಂಠಾಣೆ, ಕಾರ್ಯದರ್ಶಿ ವಿಷ್ಣುಕಾಂತ ಸೂರ್ಯವಂಶಿ, ಉಪಾಧ್ಯಕ್ಷ ಸಚಿನ್ ಕಾಂಬ್ಳೆ, ಕಾರ್ಯದರ್ಶಿ ಮಹಾದೇವ ಗಾಯಕವಾಡ ನಿಯೋಗದಲ್ಲಿದ್ದರು.