ಬೀದರ್: ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮತ್ತು ಶಿಕ್ಷಣ ನಮ್ಮ ಹಕ್ಕು ವಿಚಾರ ಸಂಕಿರಣ ಕಾರ್ಯಕ್ರಮ ಜು.13ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ರಾಜ್ಯದ 37 ಶೈಕ್ಷಣಿಕ ಜಿಲ್ಲೆಗಳ ತಲಾ ಒಬ್ಬ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಯಕ್ರಮ ಅರ್ಥಪೂರ್ಣ, ಅದ್ದೂರಿಯಾಗಿ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವೈಜ್ಞಾನಿಕ ಸಂಶೋಧನೆ ಪರಿಷತ್ ರಾಜ್ಯ ಸಂಚಾಲಕ ದಾನಿ ಬಾಬುರಾವ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಸಾನ್ನಿಧ್ಯ, ಸಂಶೋಧನೆ ಪರಿಷತ್ನ ಸಂಸ್ಥಾಪಕ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಮ್ಖಾನ್, ಹಿರಿಯ ವಿಜ್ಞಾನಿ ಡಾ.ಎ.ಎಸ್. ಕಿರಣಕುಮಾರ ಇತರರು ಪಾಲ್ಗೊಳ್ಳುವರು. ಸಂಸದ ಸಾಗರ್ ಖಂಡ್ರೆ, ಎಂಎಲ್ಸಿಗಳಾದ ಮಾರುತಿರಾವ ಮೂಳಗೆ, ಡಾ.ಚಂದ್ರಶೇಖರ ಪಾಟೀಲ್, ಹೈಕಶಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ ಚೇತನರಾಮ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.
ಡಾ.ಗಂಗಾಂಬಿಕೆ ಅಕ್ಕ ಬೀದರ್, ಶಿವಣ್ಣಗೌಡ ಪಾಟೀಲ್ ಕಲಬುರಗಿ, ಚನ್ನಪ್ಪ ಆನೇಗುಂದಿ ಯಾದಗಿರಿ, ಡಾ.ಮಲ್ಲೇಶ ಗೌಡ ಪಾಟೀಲ್ ರಾಯಚೂರು, ಕೆ.ದೇವರಾಜ ಬಳ್ಳಾರಿ, ಡಾ.ಈಶ್ವರ ಸವಡಿ ಕೊಪ್ಪಳ, ಗೋಪಾಲ ವಿಜಯನಗರ, ಲಕ್ಷರಾಮ ಮೈಸೂರು, ಜೆ.ಜೆ. ರಮೇಶ ಹಾಸನ, ಸುಂದರ ಕೆ. ದಕ್ಷಿಣ ಕನ್ನಡ, ಆರ್.ಮಹೇಂದ್ರ ಚಾಮರಾಜನಗರ, ಡಾ.ದೇವರಾಜ ಮಾರ್ಕಾಲು ಮಂಡ್ಯ, ಸಿ.ವಿ. ಭರತ ಚಿಕ್ಕಮಗಳೂರು, ಐನಮಂಡ ಲೀಲಾವತಿ ಗಣಪತಿ ಕೊಡುಗು, ಮನು ಹಂದಾಡಿ ಉಡುಪಿ ಸೇರಿ ರಾಜ್ಯದ 37 ಶೈಕ್ಷಣಿಕ ಜಿಲ್ಲೆಗಳ ತಲಾ ಒಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಳೆದ ವರ್ಷ ಪ್ರಶಸ್ತಿಗೆ ಆಯ್ಕೆಯಾದ ಡಾ.ಬಿ.ವಿ. ಶಿವಪ್ರಕಾಶ ಬೀದರ್ ಅವರಿಗೆ ಸಹ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಮೌಢ್ಯಮುಕ್ತ ಸಮಾಜ ನಿರ್ಮಾಣ ಉದ್ದೇಶದಿಂದ ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ ನೇತೃತ್ವದಲ್ಲಿ ನಾಲ್ಕು ವರ್ಷ ಹಿಂದೆ ಸ್ಥಾಪಿಸಿದ ವೈಜ್ಞಾನಿಕ ಸಂಶೋಧನೆ ಪರಿಷತ್ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಶಾಖೆ ಆರಂಭಿಸಿ ಕಮ್ಮಿ ಅವಧಿಯಲ್ಲಿ 50 ಸಾವಿರಕ್ಕೂ ಅಕ ಸದಸ್ಯರನ್ನು ಹೊಂದಿದೆ. ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಗಡಿ ಜಿಲ್ಲೆಯಲ್ಲಿ ಆಯೋಜಿಸಿದ್ದು ಖುಷಿ ತಂದಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಶಿವಶಂಕರ ಟೋಕರೆ, ಕಲಾಲ್ ದೇವಿಪ್ರಸಾದ, ಎಂಡಿ ರಫಿ ತಾಳಿಕೋಟೆ, ರೇವಣಸಿದ್ದಪ್ಪ ಜಲಾದೆ, ರಾಜೇಂದ್ರ ಮಣಗೇರೆ, ಪಾಂಡುರಂಗ ಬೆಲ್ದಾರ್ ಇದ್ದರು.