ಜಿಲ್ಲೆ

ಶಾಂತಿ-ಸೌಹಾರ್ದತೆಯಿಂದ ಜೀವನ ಸಾಗಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಇಲ್ಲಿ ನಾವೆಲ್ಲರೂ ಎಲ್ಲ ಧರ್ಮಗಳ ಮಧ್ಯೆ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎಂದು ಬೆಂಗಳೂರಿನ ಬಿಷಪ್ ಎನ್.ಎಲ್. ಕರ್ಕರೆ ಹೇಳಿದರು.
ಇಲ್ಲಿನ ವಿದ್ಯಾನಗರ ಬಡಾವಣೆಯ ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ಬೆಳ್ಳಿ ಮಹೋತ್ಸವ ಸಮಾರೋಪದಲ್ಲಿ ಮಾತನಾಡಿ, ಮನುಷ್ಯ ಇಂದು ಭೌತಿಕ ಸುಖದ ಬೆನ್ನು ಹತ್ತಿದ್ದರಿಂದ ನಾನಾ ಸಮಸ್ಯೆ ಹಾಗೂ ಗೊಂದಲಗಳಲ್ಲಿ ಸಿಲುಕಿದ್ದಾನೆ. ಧರ್ಮ, ಅಧ್ಯಾತ್ಮ ಚಿಂತನೆಗಳಿಂದ ವಿಮುಖರಾಗಿ ಜೀವನದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರಿಸ್ತನ ವಿಚಾರ, ತತ್ವ ಹಾಗೂ ಆದರ್ಶಗಳನ್ನು ಅನುಕರಣೆ ಮಾಡಿದರೆ ಬದುಕಿನ ನೈಜ ಆನಂದ ಪಡೆಯಬಹುದು. ಸಾರ್ಥಕ್ಯ ಜೀವನಕ್ಕೆ ಯೇಸು ಕ್ರಿಸ್ತನ ಸಂದೇಶಗಳೇ ಆಧಾರ. ಇವು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದರು.
ಕಳೆದ 25 ವರ್ಷಗಳ ಹಿಂದೆ ವಿದ್ಯಾನಗರದಲ್ಲಿ ಚರ್ಚ್ ಸ್ಥಾಪಿಸಲಾಗಿತ್ತು. ಇದೀಗ ದೊಡ್ಡಮಟ್ಟದಲ್ಲಿ ಬೆಳೆದಿದ್ದು ಖುಷಿ ತಂದಿದೆ. ಇಲ್ಲಿನ ಎಲ್ಲ ಜನರು ಒಗ್ಗಟ್ಟಿನಿಂದ ಇದ್ದು ಚರ್ಚ್ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮೆಥೋಡಿಸ್ಟ್ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ, ರೆ.ಸೈಮನ್ ಮಾಕ್೯, ಎಸ್.ಎಲ್. ತುಕರಾಮ, ಅಲ್ಬಟ್೯ ಕೋಟೆ, ಡಾ.ಸತೀಶಕುಮಾರ ಎಂ. ಡೇವಿಡ್, ಬಿ.ಜೆ. ಸ್ಯಾಮೂವೆಲ್, ಸ್ವಾಮಿದಾಸ ಬೇಂದ್ರೆ, ಎಂ.ಎಚ್. ಡೇವಿಡ್, ಸುಧಾಕರ ಕಟ್ಟಿ, ಸಲೋಮನ್, ಅರುಣ, ಸುಭದ್ರಾ ಡೇವಿಡ್, ಸರೋಜನಿ ಶಿರೋಮಣಿ ಇತರರಿದ್ದರು. ಚರ್ಚ್ ಸಭಾ ಪಾಲಕರಾದ ನಿರ್ಮಲಾ ಸೈಮನ್ ಮಾಕ್೯ ಪ್ರಾಸ್ತಾವಿಕ ಮಾತನಾಡಿ, ನಿರೂಪಣೆ ಮಾಡಿದರು. ಸಂಪತಕುಮಾರ ಸ್ವಾಗತಿಸಿದರು.

ಭವ್ಯ ಮೆರವಣಿಗೆ
ಎರಡು ದಿನ ದೈವ ಸಂದೇಶ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ನಾನಾ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು. ಇಲ್ಲಿನ ಮೈಲೂರು ಕ್ರಾಸ್ ನಿಂದ ವಿದ್ಯಾನಗರ ಚರ್ಚ್ ವರೆಗೆ ನಡೆಯಿತು. ಸಾರೋಟಿಯಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್. ಕರ್ಕರೆ ಅವರು ಆಸೀನರಾಗಿದ್ದರು. ಮೆರವಣಿಗೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ಹೆಚ್ಚಿಸಿದ್ದವು.