ಬೀದರ್: ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಮಕ್ಕಳ ವಿಭಾಗ ಪರಿಶೀಲಿಸಿ, ವೈದ್ಯರ ಗೈರು, ಅವ್ಯವಸ್ಥೆಗೆ ಗರಂ ಆದರು.
ಎನ್ಆರ್ಸಿ, ಎನ್ಐಸಿಯು ಹಾಗೂ ಪಿಐಸಿಯು ವಿಭಾಗಗಳಿಗೆ ಭೇಟಿ ನೀಡಿದ್ದರು. ವಿಭಾಗದಲ್ಲಿ ಮಕ್ಕಳ ತಜ್ಞ ವೈದ್ಯರು ಗೈರಾಗಿದ್ದಕ್ಕೆ ಕೋಸಂಬೆ ಪ್ರಶ್ನಿಸಿದರು. ಜಿಲ್ಲೆಯಲ್ಲಿ ಅಪೌಷ್ಠಿಕದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಸಾಕಷ್ಟಿದೆ ಹಾಗೂ 168 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆದರೆ ಇಲ್ಲಿನ ಎನ್ಆರ್ಸಿಯಲ್ಲಿ ಮೂರು ಮಕ್ಕಳು ಮಾತ್ರ ದಾಖಲಾಗಿದ್ದು, ಅದರಲ್ಲಿ ಒಂದು ಮಗು ಮಾತ್ರ ವಿಭಾಗದಲ್ಲಿತ್ತು. ಉಳಿದೆರಡು ಮಕ್ಕಳು ಬೇರೆ ಕಡೆ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ವಿಭಾಗದಲ್ಲಿ ನ್ಯೂನತೆ ಸರಿಪಡಿಸಬೇಕು. ಇಲ್ಲಿನ ಮಕ್ಕಳ ವಿಭಾಗದಲ್ಲಿ ಅವ್ಯವಸ್ಥೆಗೆ ಕಾರಣರಾದವರನ್ನು ನೋಟಿಸ್ ಜಾರಿ ಮಾಡಬೇಕು ಎಂದು ಕೋಸಂಬೆ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ್, ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಶಕುಂತಲಾ ಕೌಜಲಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರ ಇತರರಿದ್ದರು.