ಜಿಲ್ಲೆ

ಹೆಬ್ಬಾಳೆ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುವಂತಾಗಲಿ ಎಂಬ ಕಾರಣಕ್ಕೆ ಡಾ.ಜಗನ್ನಾಥ ಹೆಬ್ಬಾಳೆ ಅವರ ಬದುಕು ಮತ್ತು ಸಾಧನೆ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್ ಹೇಳಿದರು.
ಹಾಲಹಳ್ಳಿ ಬಳಿಯ ಬೀದರ್ ವಿವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿ ಡೀನ್ ಹಾಗೂ ಸಾಹಿತಿ, ಜಾನಪದ ವಿದ್ವಾಂಸ ಡಾ.ಜಗನ್ನಾಥ ಹೆಬ್ಬಾಳೆ ಬದುಕು ಬರಹ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಇದು ಒಬ್ಬ ವ್ಯಕ್ತಿ ಕುರಿತ ಕಾರ್ಯಕ್ರಮವಲ್ಲ. ಬದಲಾಗಿ ವ್ಯಕ್ತಿಯೊಬ್ಬರು ಹತ್ತಾರು ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಅರಿತು ಪ್ರೇರಣೆ ಪಡೆಯುವುದಕ್ಕಾಗಿ ಆಯೋಜಿಸಿರುವ ವಿಚಾರ ಸಂಕಿರಣ ಇದಾಗಿದೆ ಎಂದರು.
ಹೆಬ್ಬಾಳೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಕಲೆ, ಸಾಹಿತ್ಯ, ಬೋಧನೆ, ಸಂಶೋಧನೆ, ಜಾನಪದ, ಕಾರ್ಯಕ್ರಮ ಆಯೋಜನೆ ಹೀಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾಡಿನ ವಿದ್ವಾಂಸರು, ಕಲಾವಿದರನ್ನು ಜಿಲ್ಲೆಗೆ ಆಹ್ವಾನಿಸಿ ಸ್ಥಳೀಯರಲ್ಲಿ ಕಲಾಭಿರುಚಿ ಹೆಚ್ಚಿಸಿದ್ದಾರೆ. ಹಾಗೆಯೇ ಇಲ್ಲಿನ ಕಲಾವಿದರಿಗೆ ದೇಶದ ವಿವಿಧೆಡೆ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಮೂಲಕ ಸಾಂಸ್ಕೃತಿಕ ವಿನಿಮಯಕ್ಕೆ ನೆರವಾಗಿದ್ದಾರೆ ಎಂದು ಕೊಂಡಾಡಿದರು.
ಹಿರಿಯ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, ಡಾ.ಹೆಬ್ಬಾಳೆ ಅವರಲ್ಲಿನ ಸಂಘಟನಾ ಶಕ್ತಿ ಅನನ್ಯವಾಗಿದೆ. ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಬೀದರ್ ನಲ್ಲಿ ಶುರುವಾಗಲು ಹೆಬ್ಬಾಳೆ ಕಾರಣರು. ಜಾನಪದ ಪರಿಷತ್ಗೆ ಜೀವ ತುಂಬಿರುವ ಅವರು, ಕರ್ನಾಟಕ ಸಾಹಿತ್ಯ ಸಂಘ, ಕಲಾವಿದರು ಮತ್ತು ಬರಹಗಾರರ ಸಂಘ ಹೀಗೆ ಹಲವು ಸಂಘ ಸಂಸ್ಥೆಗಳನ್ನು ಶಕ್ತಿಯುತವಾಗಿ ಬೆಳೆಸಿದ್ದಾರೆ ಎಂದರು.
ನವದೆಹಲಿಯ ವೆಂಕಟೇಶ್ವರ ವಿವಿ ಸಂಶೋಧನಾ ಮಾರ್ಗದರ್ಶಕ ಪ್ರೊ.ಉಮಾಕಾಂತ ಪಾಟೀಲ್ ಮಾತನಾಡಿದರು. ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿದ್ದರು. ವಿವಿ ಕುಲಸಚಿವ ಪರಮೇಶ್ವರ ನಾಯಕ್, ರಾಷ್ಟ್ರೀಯ ಜಾನಪದ ಕಲಾ ಪರಿಷತ್ ಕಾರ್ಯದಶರ್ಿ ಡಾ.ರಾಜಕುಮಾರ ಹೆಬ್ಬಾಳೆ, ಡಾ.ಜಗನ್ನಾಥ ಹೆಬ್ಬಾಳೆ, ಸಾವಿತ್ರಿ ಜೆ., ಮಹಾನಂದಾ ಮಡಕಿ, ರಾಮಚಂದ್ರ ಗಣಾಪುರ ಇತರರಿದ್ದರು.
ಅಶೋಕ ಕೋರೆ ಪ್ರಾಸ್ತಾವಿಕ ಮಾತನಾಡಿದರು. ಸುರೇಖಾ ಬಿರಾದಾರ್ ಸ್ವಾಗತಿಸಿದರು. ಸುನೀತಾ ಕೂಡ್ಲಿಕರ್ ನಿರೂಪಣೆ ಮಾಡಿದರು.