ಜಿಲ್ಲೆ

ಚಲಿಸುತ್ತಿರುವಾಗಲೇ ಮುರಿದ ಬಸ್‌ ಎಕ್ಸಲ್

ರೇವಣಸಿದ್ದಪ್ಪ ಪಾಟೀಲ್

ಔರಾದ್: ಚಲಿಸುತ್ತಿರುವಾಗಲೇ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್‌ ನ ಎಕ್ಸಲ್ ಬ್ಲೇಡ್ ಮುರಿದು ಹಿಂದಿನ ಟೈರ್ಗಳ ಮೇಲೆ ನಿಂತಿರುವ ಘಟನೆ ತಾಲೂಕಿನ ಕಂದಗೂಳ ಹತ್ತಿರ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಹಿಂಬದಿ ಎಕ್ಸಲ್ ಬ್ಲೇಡ್ ಮುರಿದಿರುವುದನ್ನು ಗಮನಿಸುತ್ತಲೇ ಚಾಲಕ ಬಸ್ ನಿಲ್ಲಿಸಿ ಒಳಗಡೆಯಿದ್ದ ಸುಮಾರು 30 ಪ್ರಯಾಣಿಕರನ್ನು ರಕ್ಷಿಸಿದ್ದಾನೆ. ಬೀದರ್-1 ಘಟಕದ ಈ ಬಸ್ ನಿತ್ಯ ಜಿಲ್ಲಾ ಕೇಂದ್ರ ಬೀದರ್ ನಿಂದ ಬೆನಕನಳ್ಳಿ, ಕಂದಗೂಳ, ವಲ್ಲೇಪುರ, ಮಹಾರಾಜಾ ವಾಡಿ, ಸೋರಳ್ಳಿ ಮಾರ್ಗವಾಗಿ ಜಂಬಗಿಗೆ ಸಂಚರಿಸುತ್ತಿತ್ತು. ಬೆಳಗ್ಗೆಯಿಂದ ರಾತ್ರಿವರೆಗೆ ಐದು ಸಲ ಓಡಾಡುತ್ತಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಬಸ್ ಮೂಲಕ ಬೀದರ್ ಕ್ಕೆ ತೆರಳುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಡಕೋಟಾ ಬಸ್ಗಳನ್ನು ಸಂಚಾರಕ್ಕೆ ಬಿಟ್ಟಿದ್ದೇ ಇದಕ್ಕೆ ಕಾರಣ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ನಿತ್ಯ ಡಕೋಟಾ ಬಸ್ ಸಂಚರಿಸುತ್ತವೆ. ಇಂಥ ಘಟನೆ ಆಗಾಗ್ಗೆ ನಡೆಯುತ್ತಿದ್ದರೂ ಸಾರಿಗೆ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.