ಜಿಲ್ಲೆ

ಎಸ್ಪಿ ಚನ್ನಬಸವಣ್ಣ ಲಂಗೋಟಿಗೆ ಬೀಳ್ಕೊಡುಗೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೆಂಗಳೂರಿಗೆ ವರ್ಗವಾಗಿರುವ ಎಸ್ಪಿ ಚನ್ನಬಸವಣ್ಣ ಲಂಗೋಟಿ ಅವರನ್ನು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೃದಯಸ್ಪರ್ಶಿ ಸನ್ಮಾನ ಮಾಡಿ ಬೀಳ್ಕೊಡಲಾಯಿತು. ಇದೇ ವೇಳೆ ನೂತನ ಎಸ್ಪಿ ಪ್ರದೀಪ್ ಗುಂಟಿ ಅವರನ್ನು ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿದ ಲಂಗೋಟಿ ಮಾತನಾಡಿ, ಭಾರತದಲ್ಲಿ ಬೀದರ್ ಇದೆ. ಆದರೆ ಬೀದರ್ ನಲ್ಲಿ ಇಡೀ ಭಾರತವೇ ಅಡಗಿದೆ. ನಾನು ಇಲ್ಲಿಂದ ಸಂತಸದಿಂದ ಹೋಗುತ್ತಿರುವೆ. ಇಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ಹೇಳಿದರು.
ಅಧಿಕಾರ ಇದ್ದಾಗ ರಕ್ತಸಂಬಂಧ ಹುಡುಕಿಕೊಂಡು ಬಹಳ ಜನ ಬರುತ್ತಾರೆ. ಆದರೆ ಎಲ್ಲಕ್ಕಿಂತ ದೊಡ್ಡದು ಮಾನವೀಯ ಸಂಬಂಧ. ಹೀಗಾಗಿ ಶಿಷ್ಟರ ರಕ್ಷಣೆ, ದುಷ್ಟರಿಗೆ ಶಿಕ್ಷೆ ಎಂಬುದನ್ನು ಅರಿತು ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದ ಅವರು, ನಾನು ಬಹಳ ಉತ್ತಮ ಕೆಲಸ ಮಾಡಿದ್ದೇನೆ ಎಂದು ಬಹಳಷ್ಟು ಜನ ಹೇಳಿದ್ದಾರೆ. ಆದರೆ ಇದರ ಹಿಂದೆ ಜಿಲ್ಲೆಯ 1682 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಹಕಾರವಿದೆ. ನನ್ನ ಅವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸ್ಪಿ ಪ್ರದೀಪ್ ಗುಂಟಿ, ಜಿಲ್ಲಾಧಿಕಾರಿ ಗೋವಿಂದರಡ್ಡಿ ಮಾತನಾಡಿದರು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಪೂರ್ಣಿಮಾ ಜಾಜ್೯, ಶಿವಕುಮಾರ ಕಟ್ಟೆ, ಶಾಹೀನ್ ಪಟೇಲ್, ಹೆಚ್ಚುವರಿ ಎಸ್ಪಿಗಳಾದ ಮಹೇಶ ಮೇಘಣ್ಣವರ್, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವನಗೌಡ ಪಾಟೀಲ್ ಇತರರಿದ್ದರು.