ಜಿಲ್ಲೆ

ಕಾನೂನು ಹೋರಾಟಕ್ಕೆ ಸಿದ್ಧ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಹಾಗೂ ಪ್ರಾಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿಲ್ಲ. ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದು, ಯಾವುದೇ ರೀತಿಯ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಹೇಳಿದ್ದಾರೆ.
ಅರಳಿ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾನು ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅವ್ಯವಹಾರ, ಅಕ್ರಮ ಅಥವಾ ಆರ್ಥಿಕ ನಷ್ಟ ಸಹ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ವೇಳೆ 3 ಕೋಟಿ ರೂ. ಇತ್ತು. ಅಧಿಕಾರದ ಅವಧಿ ಮುಗಿದಾಗ 23 ಕೋಟಿ ರೂ. ಇಟ್ಟಿರುವೆ. ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ ತನಿಖಾ ತಂಡ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ತಂಡ ಮತ್ತು ಲೋಕಾಯುಕ್ತ ತಂಡ, ಕಾನೂನಿನ ಲೋಪದೋಷಗಳಾಗಿವೆ ಹೊರತು ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವಾಗಿದೆ ಎಂದು ವರದಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲ ತೀರ್ಮಾನ ಅಧಿಕಾರಿಗಳ ಸಮ್ಮುಖ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ನನ್ನ ಅವಧಿಯಲ್ಲಿನ ಸಭೆಯ ಸದಸ್ಯರಾಗಿದ್ದ ಇಂದಿನ ಪೌರಾಡಳಿತ ಸಚಿವ ರಹೀಮ್ ಖಾನ್, ರಘುನಾಥ ಮಲ್ಕಾಪುರೆ, ಅರವಿಂದಕುಮಾರ ಅರಳಿ ಕಡತಗಳಿಗೆ ಸಹಿ ಹಾಕಿದ್ದಾರೆ. ಬಿಎಸ್. ವೈ ಬಡಾವಣೆ ನಿವೇಶನಗಳನ್ನು ಲಾಟರಿ ಮೂಲಕ ಹರಾಜು ಮಾಡಿದ ಮೊದಲ ಕೀರ್ತಿ ಪ್ರಾಧಿಕಾರಕ್ಕೆ ಸಲ್ಲುತ್ತದೆ. ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ವರದಿ ಲೋಕಾಯುಕ್ತ ಇಲಾಖೆ ಸಲ್ಲಿಸಿದೆ ಎಂದು ಹೇಳಿದ್ದಾರೆ.

ಸೈಟ್ ನೀಡದಿದ್ದಕ್ಕೆ ದ್ವೇಷ
ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ ನಗರದ ಉದ್ಯಾನವನದಲ್ಲಿ ಒಂದು ಸೈಟ್ ಕೊಡುವಂತೆ ಕೇಳಿದ್ದರು. ಆದರೆ ಸೈಟ್ ನೀಡಲು ಬರಲ್ಲ. ನೀಡಿದರೆ ಅಕ್ರಮವಾಗುತ್ತದೆ ಎಂದು ಹೇಳಿದ್ದಕ್ಕೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಅರಳಿ ಮಾಡಿರುವ ಅಕ್ರಮಗಳನ್ನು ಶೀಘ್ರದಲ್ಲಿ ಬಯಲಿಗೆಳೆಯುವೆ ಎಂದು ವಾಲಿ ಹೇಳಿದ್ದಾರೆ.