ಬೀದರ್: ಟಾಟಾ ಎಲೆಕ್ಟ್ರಾನಿಕ್ಸ್ ವತಿಯಿಂದ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜುಲೈ 5 ರಂದು ಬೆಳಿಗ್ಗೆ 9ಕ್ಕೆ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
18 ರಿಂದ 22 ವರ್ಷದ ಒಳಗಿನ 10ನೇ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಕಾಲೇಜು ಪ್ರಾಚಾರ್ಯೆ ಡಾ. ವಿನಿತಾ ಪಾಟೀಲ ತಿಳಿಸಿದ್ದಾರೆ.
ಆಯ್ಕೆಯಾಗುವ 10ನೇ, ದ್ವಿತೀಯ ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳಿಗೆ ಮಾಸಿಕ ರೂ. 12 ಸಾವಿರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ರೂ. 13,500 ಸ್ಟೈಫಂಡ್ ದೊರೆಯಲಿದೆ ಎಂದು ಹೇಳಿದ್ದಾರೆ.
ಕಾರ್ಖಾನೆಯು ಉಚಿತ ವಸತಿ, ಉಚಿತ ಸಾರಿಗೆ, ಆಹಾರ, ರೂ. 2 ಲಕ್ಷದ ವರೆಗೆ ವೈದ್ಯಕೀಯ ವಿಮೆ, ಕೆಲಸಗಾರರ ಪರಿಹಾರ ವಿಮೆ ಸೌಲಭ್ಯ ಕಲ್ಪಿಸಲಿದೆ. ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಮಹಿಳಾ ಅಭ್ಯರ್ಥಿಗಳಿಗೆ ಭದ್ರತೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ. ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಮಾರ್ಗದರ್ಶನದಲ್ಲಿ ಸಂದರ್ಶನ ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿಯ ಅಂಕ ಪಟ್ಟಿ, ವೈಯಕ್ತಿಕ ವಿವರ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ಪ್ರೊ. ಗುರುರಾಜ ನಾಸೆ (9449460181) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.