ಜಿಲ್ಲೆ

ಗ್ಯಾರಂಟಿ ಪರಿಣಾಮಕಾರಿ ಅನುಷ್ಠಾನಕ್ಕೆ ತನ್ನಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದರ ಜತೆಗೆ ಇದರ ಲಾಭ ಎಲ್ಲ ಬಡ ಜನರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಕಾಲಕಾಲಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಯೋಜನೆಗಳ ಲಾಭ ಎಲ್ಲರಿಗೂ ತಲುಪುವಂತೆ ನಿಗಾ ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಯೋಜನೆಗಳನ್ನು ಜನರಿಗೆ ಮುಟ್ಟುವಂತೆ ಜಾಗೃತಿ ಮೂಡಿಸಬೇಕು. ಚುನಾವಣೆಪೂರ್ವ ನೀಡಿದ ಭರವಸೆಯಂತೆ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಕೆಲ ಅರ್ಜಿಗಳು ಬಾಕಿ ಇದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಂದು ವರ್ಷದಲ್ಲಿ 29,77,887 ಜನ ಲಾಭ ಪಡೆಯುತ್ತಿದ್ದಾರೆ. ಗೃಹಜ್ಯೋತಿ 3,43,727, ಶಕ್ತಿ ಯೋಜನೆ 4,20,32,916, ಅನ್ನಭಾಗ್ಯ ಯೋಜನೆಯಡಿ 11,55,193 ಜನ ಲಾಭ ಪಡೆದಿದ್ದಾರೆ. 6808 ಫಲಾನುಭವಿಗಳು ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಇದರ ಹೊರತಾಗಿ ಕೆಲವರಿಗೆ ಗ್ಯಾರಂಟಿ ಸೌಲಭ್ಯ ಸಿಗುತ್ತಿಲ್ಲ. ಇಂಥವರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಹೇಳಿದರು.
ಗೃಹಜ್ಯೋತಿ ಅಡಿ ಕೆಲ ನಿರ್ಗತಿಕರಿಗೆ ಅರ್ಜಿ ಹಾಕಲು ಬರುವುದಿಲ್ಲ. ಅಂಥವರಿಗೆ ವಿದ್ಯುತ್ ಸಂಪರ್ಕ ಕೊಡುವ ಕೆಲಸ ಆಗಬೇಕು ಮತ್ತು ಯುವನಿಧಿ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಅನ್ನಭಾಗ್ಯ ಯೋಜನೆ ಸಮೀಕ್ಷೆ ಮಾಡಿ ಬೋಗಸ್ ಇರುವವರನ್ನು ತೆಗೆದು ಹಾಕಿ ಅರ್ಹರಿಗೆ ಲಾಭ ಸಿಗುವಂತೆ ಸಂಬಂಧಿತ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ನನಗೆ ಜವಾಬ್ದಾರಿ ನೀಡಿದ್ದು ಖುಷಿ ತಂದಿದೆ. ಯೋಜನೆಗಳನ್ನು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಸಮಿತಿ ಉಪಾಧ್ಯಕ್ಷರು ಹಾಗೂ ಸದಸ್ಯರ ಸಭೆ ನಡೆಸಿ ಜನರಿಗೆ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಇತರರಿದ್ದರು.

ಪ್ರಾಧಿಕಾರದ ಪದಾಧಿಕಾರಿಗಳು
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷ, ಐವರು ಉಪಾಧ್ಯಕ್ಷರು, 15 ಸದಸ್ಯರನ್ನು ನೇಮಿಸಲಾಗಿದೆ. ಅಮೃತರಾವ ಚಿಮಕೋಡೆ (ಅಧ್ಯಕ್ಷ), ಪೂಜಾ ಜಾಜ್೯, ಮಹ್ಮದ್ ಖಾನ್ ದುರಾನಿ, ಉದಯಕುಮಾರ ವಾರದ್, ಲತಾ ಹಾರಕೂಡೆ, ಮಾರುತಿ ಭಂಗರೆ (ಉಪಾಧ್ಯಕ್ಷರು), ಹಣಮಂತರಾವ, ಅಹ್ಮದ್ ಮೈನೊದ್ದೀನ್, ಶ್ರೀನಿವಾಸ ಮೇತ್ರೆ, ಅಮರ, ರಾಜಕುಮಾರ ಪಾಟೀಲ್, ಮಹ್ಮದ್ ರಿಯಾಜ್, ಬಸವರಾಜ ಬುಯ್ಯಾ, ಜಿತೇಂದ್ರ ಕಾಂಬ್ಳೆ, ರಾಜಕುಮಾರ ಮದ್ಕೆ, ಸಂಗ್ರಾಮಪ್ಪ, ಅಬ್ದುಲ್ ಸಾಜೀದ್ ಪಾಶಾ, ಚೆನ್ನಪ್ಪ ಉಪ್ಪೆ, ಆನಂದ ಚವ್ಹಾಣ್, ರಾಮಣ್ಣ ವಡೆಯರ್, ಮಹೇಶ ಪಾಟೀಲ್ (ಸದಸ್ಯರು) ಹಾಗೂ ಅಪರ ಜಿಲ್ಲಾಕಾರಿಗಳನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.