ಬೀದರ್: ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಏಕ್ ಪೆಡ್ ಮಾ ಕೆ ನಾಮ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನಲೆಯಲ್ಲಿ ನಗರದ ಪಂಡಿತ್ ದಿನದಯಾಳ ಉಪಾಧ್ಯಾಯ ಬಯಲು ರಂಗಮಂದಿರದಲ್ಲಿ ಸಸಿ ನೆಟ್ಟು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬರೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪರಿಸರ ಪೋಷಣೆ ಮಾಡಬೇಕು. ಮಕ್ಕಳಂತೆ ಪರಿಸರ ಬೆಳೆಸಬೇಕಿದೆ. ಪರಿಸರದ ನಾಶ ತಡೆಯದಿದ್ದರೆ ಗಂಡಾಂತರ ತಪ್ಪಿದ್ದಲ್ಲ ಎಂದರು.
ಪರಿಸರ ನಾಶವಾಗುತ್ತಿರುವುದು ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ. ಪರಿಸರ ಅಸಮತೋಲನದಿಂದ ನೈಸರ್ಗಿಕ ವಿಪತ್ತುಗಳು ಆವರಿಸುತ್ತಿವೆ. ಪರಿಸರ ಮಾಲಿನ್ಯದಿಂದ ಇಡೀ ವಿಶ್ವದ ಮೇಲೆ ಸಂಕಟ ಬಂದಿದೆ. ಜಾಗತಿಕ ತಾಪಮಾನ ಹೆಚ್ಚಿದೆ. ಸ್ವಾರ್ಥ, ದುರಾಸೆಗೆ ಮನುಷ್ಯ ಪರಿಸರಕ್ಕೆ ಕುತ್ತು ತಂದಿರುವುದು ದುರದೃಷ್ಟಕರ ಸಂಗತಿ. ಹೀಗಾಗಿ ಹೆಚ್ಚೆಚ್ಚು ಸಸಿ ನೆಡಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಯಾವುದೋ ಲಾಭದ ದೃಷ್ಟಿಯಿಂದ ಗಿಡ, ಮರಗಳನ್ನು ನಾಶಪಡಿಸುವುದು ಸರಿಯಲ್ಲ. ಏನೇ ಅಭಿವೃದ್ಧಿ ನಡೆದರೂ ಪರಿಸರಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸಬೇಕು ಎಂದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಪ್ರತಿಯೊಬ್ಬರಿಗೆ ಗಾಳಿ, ಬೆಳಕು, ಅನ್ನ, ನೀರು ಎಷ್ಟು ಮುಖ್ಯವೋ ಪರಿಸರವೂ ಅಷ್ಟೇ ಮುಖ್ಯ ಇದೆ. ಕನಿಷ್ಠ ಒಂದು ಗಿಡ ನೆಟ್ಟು ಸಂರಕ್ಷಿಸಿ ಪೋಷಿಸುವ ಸಂಕಲ್ಪ ಮಾಡಬೇಕು. ಪರಿಸರವೇ ನಮ್ಮ ಬದುಕಿನ ಮೂಲ ಆಧಾರವಾಗಿದೆ. ಇದಿಲ್ಲದಿದ್ದರೆ ಎಲ್ಲರ ಜೀವನವೇ ಅಭದ್ರವಾಗಲಿದೆ ಎಂದು ಹೇಳಿದರು.
ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಶಶಿಧರ ಹೊಸಳ್ಳಿ, ರಾಜಶೇಖರ ನಾಗಮೂರ್ತಿ, ಮಹೇಶ್ವರ ಸ್ವಾಮಿ, ಚನ್ನಪ್ಪ ಗೌರಶೆಟ್ಟಿ, ನಾಗರಾಜ ಕರ್ಪೂರ್, ನಿತೀನ್ ಕರ್ಪೂರ್, ಗಣೇಶ್ ಭೋಸ್ಲೆ, ಸಂಜಯ ಜೀರ್ಗೆ, ರೋಷನ್ ವರ್ಮಾ, ದೀಪಕ್ ಠಾಕೂರ್, ರಾಜು ಜಮಾದಾರ, ಸೂರ್ಯಕಾಂತ ಯಲ್ಲಾಪುರ ಇತರರಿದ್ದರು.