ಜಿಲ್ಲೆ

ಸಮರ್ಪಕ ಬೆಳೆ ವಿಮೆ ಪರಿಹಾರ ಕೊಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕಳೆದ ವರ್ಷ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಸಿದ ಬಹಳಷ್ಟು ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ. ಕೂಡಲೇ ಸಮರ್ಪಕವಾಗಿ ಎಲ್ಲ ರೈತರಿಗೆ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.
ನಗರಕ್ಕೆ ಆಗಮಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿ, 2023-24ನೇ ಸಾಲಿನಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಬೆಳೆ ಹಾನಿಯಾದರೂ ಬಹುಸಂಖ್ಯೆ ರೈತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಬೆಳೆ ವಿಮೆ ಪರಿಹಾರ ಸಿಗದಿರುವ ರೈತರಿಗೆ ಶೀಘ್ರದಲ್ಲಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಹನಿ ನೀರಾವರಿ ಯೋಜನೆಯಲ್ಲಿ ಪ್ರತಿ ರೈತನಿಗೆ ಕನಿಷ್ಠ ನಾಲ್ಕು ಹೆಕ್ಟೇರ್ ವರೆಗೆ ಸೌಲಭ್ಯ ನೀಡಬೇಕು. ಈ ಯೋಜನೆಯಲ್ಲಿ ಎಸ್ಸಿ, ಎಸ್ಟಿ ರೈತರಿಗೆ ಶೇ.90 ರಿಯಾಯಿತಿ ಕೊಡುತ್ತಿದ್ದು, ಸಾಮಾನ್ಯ ರೈತನಿಗೆ ಶೇ.45 ಮಾತ್ರ ರಿಯಾಯಿತಿ ಇದೆ. ಇದು ರೈತರಲ್ಲಿ ಮಾಡುತ್ತಿರುವ ತಾರತಮ್ಯ. ಹೀಗಾಗಿ ಎಲ್ಲ ರೈತರಿಗೂ ಶೇ.90 ರಿಯಾಯಿತಿ ನೀಡಬೇಕು ಎಂದರು.
ತಾಡಪತ್ರಿ ಹಾಗೂ ಸ್ಪಿಂಕ್ಲರ್ ಪೈಪ್ ಬೇಡಿಕೆ ಹೆಚ್ಚಿದ್ದು, ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ಪೂರೈಕೆ ಮಾಡಬೇಕು. ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ಇನ್ನು 11 ಸಾವಿರಕ್ಕಿಂತ ಜಾಸ್ತಿ ರೈತರಿಗೆ ಸಿಕ್ಕಿಲ್ಲ. ಶೀಘ್ರದಲ್ಲಿ ಉಳಿದಿರುವ ರೈತರಿಗೆ ಪರಿಹಾರ ವಿತರಿಸಬೇಕು. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ, ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಪ್ರಮುಖರಾದ ಚಂದ್ರಶೇಖರ ಜಮಖಂಡಿ, ಶಂಕ್ರಪ್ಪ ಪಾರಾ, ಶೇಷರಾವ ಕಣಜಿ, ಪ್ರಕಾಶ ಬಾವಗೆ, ಬಾಬುರಾವ ಜೋಳದಾಬಕೆ, ಸಿದ್ದಣ್ಣ ಭೂಶೆಟ್ಟಿ, ಪ್ರವೀಣ ಕುಲಕರ್ಣಿ, ಸತೀಶ್ ನನ್ನೂರೆ, ನಾಗಯ್ಯ ಸ್ವಾಮಿ, ಸುಭಾಷ ರಗಟೆ, ಸುಮಂತ ಗ್ರಾಮಲೆ, ಮಲ್ಲಿಕಾರ್ಜುನ ಬಿರಾದಾರ್, ರಾಜಕುಮಾರ ಪಾಟೀಲ್, ವಿಠ್ಠಲ್ ಪಾಟೀಲ್, ದಿಲೀಪ ಕುಲಕರ್ಣಿ ಇದ್ದರು.