ಜಿಲ್ಲೆ

ಪ್ರೇಕ್ಷಕರನ್ನು ರಂಜಿಸಿದ ಸಂಗೀತ ಸಂಜೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಿಶ್ವ ಸಂಗೀತ ದಿನಾಚರಣೆ ನಿಮಿತ್ತ ಪ್ರಗತಿ ಸಂಗೀತ ಕಲಾ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಲಾವಿದರು ಸಂಗೀತ ಸುಧೆ ಹರಿಸಿದರು.
ಯುವ ಮತ್ತು ಹಿರಿಯ ಕಲಾವಿದರು ಪ್ರಸ್ತುತಪಡಿಸಿದ ವಿವಿಧ ಪ್ರಕಾರಗಳ ಸಂಗೀತಕ್ಕೆ ಪ್ರೇಕ್ಷಕರು ತಲೆದೂಗುವಂತೆ ಮಾಡಿತು. ಹಿಂದೂಸ್ಥಾನಿ ಗಾಯನ, ತಬಲಾ- ಹಾರ್ಮೋನಿಯಂ ಸೋಲೋ ಮತ್ತು ಗಿಟಾರ್ ವಾದನ ಪ್ರೇಕ್ಷಕರನ್ನು ರಂಜಿಸಿತು.
ವಿದ್ಯಾಲಯದ ವಿದ್ಯಾರ್ಥಿಗಳಾದ ಡಾ. ಶ್ರದ್ಧಾ ಪೊತ್ತಾರ್ ಯಮನ್ ರಾಗ, ಶ್ರೀವರ್ಧನ್ ಎಖ್ಖೆಳ್ಳಿ ಅವರು ಬಡಾಖ್ಯಾಲ್, ಮಧುವಂತಿ ರಾಗವನ್ನು ಹಾಗೂ ಶಶಾಂತ್ ಕುಲಕರ್ಣಿ ಗಿಟಾರ್ ವಾದನವನ್ನು ಪ್ರದರ್ಶಿಸಿದರು. ಸಂಸ್ಥೆಯ ಅಧ್ಯಕ್ಷ ರಮೇಶ ಕೋಳಾರ್ ಮತ್ತು ಅವರ ಪುತ್ರ ರೋಶನ್ ಕೋಳಾರ್ ತಬಲಾ ಸಾಥ್ ನೀಡಿದರು. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ರಾಜೇಂದ್ರಸಿಂಗ್ ಪವಾರ್ ಮತ್ತು ರೋಶನ್ ಅವರ ತಬಲಾ- ಹಾರ್ಮೋನಿಯಂ ಸೋಲೋ ಮಂತ್ರಮುಗ್ದರನ್ನಾಗಿಸಿತು. ಕೊನೆಗೆ ಜಿಲ್ಲೆಯ ಹಿರಿಯ ಕಲಾವಿದ ಪಂಡಿತ್ ರಾಮಲು ಗಾದಗಿ ಭೈರವಿಯಲ್ಲಿ ಛೋಟಾಖ್ಯಾಲ್ ಮತ್ತು ಪಂ. ಭೀಮಸೇನ್ ಜೋಶಿಯವರ ಭಜನೆ ಹಾಡಿ ಮುಕ್ತಾಯಗೊಳಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಪಂ.ರಾಮಲು ಗಾದಗಿ ಉದ್ಘಾಟಿಸಿ ಮಾತನಾಡಿ, ಸಂಗೀತ ಕಠಿಣ ವಿದ್ಯೆಯಾಗಿದ್ದು, ಅಭ್ಯಾಸದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಶಾಸ್ತ್ರೀಯ ಸಂಗೀತ ನಮ್ಮ ಪರಂಪರೆ, ಸಂಸ್ಕೃತಿಯಾಗಿದ್ದು, ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಪ್ರಗತಿ ಸಂಸ್ಥೆ ಮಾಡುತ್ತಿದೆ ಎಂದರು.
ಪ್ರಗತಿ ಕೊಳಾರ್ ನಿರೂಪಣೆ ಮಾಡಿದರು. ಶ್ರೇಯಾ ವಂದಿಸಿದರು. ತ್ರಿವೇಣಿ ಮತ್ತಿತರರು ಪಾಲ್ಗೊಂಡಿದ್ದರು.